Jun 7, 2009

ಮನಸ್ಸು ಮುರಿದರೂ ಸರಿ ಬಿಡು; ಮನಸ್ಸಲ್ಲಿರುವದ್ದು ಮಾತ್ರ ಹೇಳಿಬಿಡು..

ಮೊನ್ನೆ ಮಂಗಳೂರಿನ ಅಂಗಳದಲ್ಲಿದ್ದೆ. ಜೊತೆಯಿತ್ತು ಅಂದಿನ ಹಳೆ ನೆನಪುಗಳು. ಅದೇ ದಾರಿ; ಅಲ್ಲಿ ಹೊಸತನವಿತ್ತು. ಅದೇ ಮಾರ್ಕೆಟ್; ಗುರುತು ಸಿಗದಂತಿತ್ತು. ಅದೇ ಫುಟ್‌ಪಾತ್; ಮರದ ನೆರಳು ಕಾಣದಾಗಿತ್ತು. ಅದೇ ಸೆಖೆ, ಅದೇ ಮೀನು ವಾಸನೆ... ಎಲ್ಲಾ ಹತ್ತು ವರ್ಷದ ಹಿಂದಕ್ಕೆ ನನ್ನನ್ನು ದೂಡಿತು. ನೆನಪು ನೂರೊಂದು ಬಂದು ಹೋಯಿತು. ಕಾಲು ಮಾತ್ರ ನಿಲ್ಲದೇ ಸಾಗುತ್ತಿತ್ತು.

ಸಾಗುತ್ತಿತ್ತು.... ನಿಂತಿತು. ನಡೆವವರ ನಡುವಲ್ಲಿ ನನ್ನ ದೃಷ್ಟಿ ನಿಂತಿತು. ಪರಿಚಿತ ಮುಖ...ಮರೆತ ಮುಖ... ನೆನಪಾಯ್ತು. ನಾವಿಬ್ಬರೂ ಒಂದೇ ಶಾಲೆಯಲ್ಲಿ ಓದಿದ್ದೆವು. ಜೊತೆಗೇ ಪರೀಕ್ಷೆ ಬರೆದಿದ್ದೆವು. ತುಂಬಾ ನಗು, ಕೆಲವೊಮ್ಮೆ ಸ್ವಲ್ಪ ಅಳು ಹಂಚಿಕೊಂಡಿದ್ದೆವು... ಮರೆತಿದ್ದೆವು. ಆದರೆ... ಆ ದಿನಗಳನ್ನಲ್ಲ.

ಆಗಲೇ “ ಓ... ಸಯ್ಯರ ಎನ್ನ ಗಾಡಿಯೇ ಆವೋಡಾ ?" ಟ್ರಾಫ಼ಿಕ್ ಒಳಗೆ ಏಕಾಏಕಿ ನುಗ್ಗಿದರೆ ಯಾರು ತಾನೆ ಬಯ್ಯಲಿಕ್ಕಿಲ್ಲ...? ಹ್ಞೂಂ. ಅಷ್ಟೇ ಬಯ್ದದ್ದು ನನ್ನ ಪುಣ್ಯ. ಇದೆಲ್ಲ ಮಾಮೂಲಿ ಪೇಟೆಯಲ್ಲೆಲ್ಲಾ. ಅಂತೂ ಅವನ ಕೈ ಹಿಡಿದು ಬದಿಗೆ ಎಳೆದು ತಂದು ನಿಲ್ಲಿಸಿದೆ. ಅವನಂತೂ ಪೂರಾ ತಬ್ಬಿಬ್ಬು. ಅಷ್ಟರಲ್ಲೇ ಅಲ್ಲಿಗೆ ಬಂದ ಇಬ್ಬರು ಮಕ್ಕಳು ನನ್ನ ಕೈ ಹಿಡಿದರು. ಈಗ ತಬ್ಬಿಬ್ಬು ನಾನು. " ಎಂತ ಮಾರಾಯ ನೀನು ಇಲ್ಲಿ..? " ಇಬ್ಬರದೂ ಒಂದೇ ಉದ್ಗಾರ..! ನನ್ನ ಎರಡು ಪಟ್ಟು ಆಶ್ಚರ್ಯ ಅವನದ್ದು.

ಅವನದ್ದು ಒಂದೇ ಒತ್ತಾಯ. ಸರಿ . ಒಪ್ಪಿ ಹೊರಟೆ. ಅವನ ಮನೆಗೆ, ಅವನೊಟ್ಟಿಗೆ, ಅವನ ಮಕ್ಕಳೊಟ್ಟಿಗೆ. ಅದು ಸಂಜೆ ಕಾಫ಼ಿಯ ಹೊತ್ತು. ನಮಗೆ ಅದು ಊಟದ ಹೊತ್ತು, ಹಸಿವೂ ಸಹಾ ಇತ್ತು. ಅಷ್ಟೆ ಸ್ವಲ್ಪ ಹೊತ್ತು. ಹೊರಗೆ ಸುರಿವ ಬಿರುಮಳೆ. ಒಳಗೆ ಬಿಸಿ ಕಾಫ಼ಿಯ ಹೊಗೆ. ಅವನ ಹಳೆ ನೆನಪುಗಳ ಕೆದಕಿದೆ ಒಮ್ಮೆ ಸುಮ್ಮನೆ ಹಾಗೆ.

ಹಾಗೆ... ಹೇಗೆ ? ಕಾಫಿಯೂ ಸ್ವಲ್ಪ ಮಟ್ಟಿಗೆ ನಿಜ ಕಕ್ಕಿಸುತ್ತದೆ, ಗಂಗಸರದ ಹಾಗೆ. ಮುಂದಿನ ಅವನ ಮಾತೆಲ್ಲ ನನಗೆ ಕನಸಿನಂತೆ.

ಕನಸಿನಂತೆ... ಆ ದಿನಗಳಲ್ಲಿ ಅವನ ಜೀವನದಲ್ಲವಳು ಬಂದಿದ್ದಳು...ಕನಸಿನಂತೆ. ಪುರುಸೊತ್ತಿರುವಾಗೆಲ್ಲ ಅವನನ್ನು ಕೆಣಕುವುದೇ ನಮ್ಮ ಕೆಲಸ. ಅವರಿಬ್ಬರ ಬಗ್ಗೆ ಮಾತನಾಡದಿದ್ದ ದಿನ, ಏನೊ ನಿದ್ರೆ ಸರಿಯಾಗಿ ಬಾರದು. ಅಷ್ಟು ತಮಾಷೆ ಅಲ್ಲಿತ್ತು. ಜೊತೆ ಇದ್ದ ದಿನಗಳೆಲ್ಲಾ ಬಲು ಸಿಹಿಯ ಕ್ಷಣಗಳಾಗಿತ್ತವನಿಗೆ. ಒಟ್ಟಿಗೇ ಬರೆದ ಪರೀಕ್ಷೆ, ಒಟ್ಟಿಗೇ ಸುತ್ತಿದ ಕಾಲೇಜು, ಒಟ್ಟಿಗೇ ಸೋತ ಸ್ಪರ್ಧೆ, ಒಟ್ಟಿಗೇ ಕುಡಿದ ಕಾಫಿ... ಇನ್ನು ಎಷ್ಟೋ ಕನಸು ಒಟ್ಟಿಗೇ...! ಅವಳ ಆ ಪ್ರೀತಿಯ ಕಂದೀಲು ನಂದಲಿಲ್ಲ ಅವನಲ್ಲೂ ..., ನೆನಪು ನನ್ನಲ್ಲೂ. ಅವರ ಆ ಕನಸಿನ ಸೌಧ ಕುಸಿದಿರದಿದ್ದರೆ..., ಇಂದಿಗೂ ಸುಖ, ನಗು, ಸಂತಸ ಸದಾ.

ಸದಾ ಜೊತೆಯಾಗಿದ್ದವರು, ಜೊತೆಯಾಗೇ ಇದ್ದರು, ನಾವು ದೂರ ಹೋಗುವವರೆಗೂ. ಮತ್ತೆ ಅವನೇ ಮಾತು ಶುರು ಮಾಡಿದ. ಕನಸ ಕನಸಿನ ಕನಸು ಕಾಣುವುದೆ ಬರಿಯ ಕನಸಷ್ಟೇ. ನನಸಾಗದ ಕನಸು ಎಂದಿಗೂ ಕನಸೇ ಸಮ. ಹಾಗಿದ್ದರೂ, ಯಾವತ್ತೂ ನಾವಿಬ್ಬರೂ ಒಂದು ವಿಷಯ ಮಾತ್ರ ಪರಸ್ಪರ ಹಂಚಿಕೊಳ್ಳಲಿಲ್ಲ. ಅದೇ.... ಆ ಪ್ರೀತಿ ಏಕಾಂಗಿಯೇ ಉಳಿಯಿತು. ಹಾಗೇ ನಮ್ಮಿಂದ ದೂರಾಯಿತು. ದೂರ ಮಾಡಿತು..., ನನ್ನಿಂದ ಅವಳನ್ನು, ಅವಳಿಂದ ನನ್ನನ್ನು..., ಅದರಿಂದ ನಮ್ಮನ್ನು.

ನಮ್ಮನ್ನು, ಮರೆತ ಮೈಯನ್ನ ಎಚ್ಚರಿಸಿದ್ದು ಗುಡುಗು. ಯಾವ ಗೊಡವೆಯೂ ಇಲ್ಲದೆ ಸುಮ್ಮನೆ ಸುರಿವ ಮಳೆ, ಅಂದೇ ಅವರನ್ನು ದೂರಮಾಡಿದ ನಾಳೆ, ಇಬ್ಬರ ಮೇಲೂ ನನಗೆ ಸಿಟ್ಟು ಬಂತು, ಹತಾಶ ನಿಟ್ಟುಸಿರೂ ಬಂತು.

ನಿಟ್ಟುಸಿರೊಂದ ಬಿಟ್ಟು ಹೇಳಿದ. " ಮನಸ್ಸು ಮುರಿದರೂ ಸರಿ ಬಿಡು; ಮನಸ್ಸಲ್ಲಿರುವದ್ದು ಮಾತ್ರ ಹೇಳಿಬಿಡು." ಮೌನ ಮುರಿದು ಅವನೇ ಮಾತು ಮುಂದುವರಿಸಿದ. " ಸರಿ. ಹಾಗೇ... ಇವತ್ತು ಇಲ್ಲೇ ಉಳಿದು ಬೆಳಗ್ಗೆ ಹೊರಡು. ನನ್ನ ನಿನ್ನೆಯನ್ನು ಬಿಡು. ಇವತ್ತಿನ ಬಗ್ಗೆ ಮಾತಾಡ್ಲಿಕ್ಕೆ ತುಂಬಾ ಉಂಟು." ತೊಡೆ ಮೇಲೆ ಕುಳಿತಿದ್ದ ಮಕ್ಕಳನ್ನು ಎತ್ತಿಕೊಂಡು " ಅವಳೂ ಬರ‍್ಲಿ. ಗುರ‍್ತ ಆದಹಾಗೆ ಆಯ್ತು. ಮತ್ತೆ....."

ಮತ್ತೆ ಏನೂ ನೆನಪಿಲ್ಲ. ಕಣ್ಮುಚ್ಚಿದ್ದೆ. ಮಳೆಯ ಜೋಗುಳಕ್ಕೆ ಹತ್ತಿತು ಸಿಹಿಯ ನಿದ್ದೆ. ಆ ನಿದ್ದೆಯಿಂದಲೂ ಎದ್ದೆ, ನೆನಪಾದ ಅವನ ಆ ಮಾತಿಗೆ, ಮತ್ತೆ ಆಲೋಚನೆಗೆ ಬಿದ್ದೆ. " ಮನಸ್ಸು ಮುರಿದರೂ ಸರಿ ಬಿಡು; ಮನಸ್ಸಲ್ಲಿರುವದ್ದು ಮಾತ್ರ ಹೇಳಿಬಿಡು... "

No comments:

Post a Comment