Mar 17, 2013

ಅನಿಕೇತನ ಅಂತರಂಗದ ಕಡೆಗೆ...

     ಹೊಸತೊಂದು ದಿನದ ಕನಸ ಹಿಡಿದು ಸೂರ್ಯ ಬೆಳಕು ಮೂಡಿಸಿದ್ದ. ಮತ್ತೊಂದು ಕನಸ ಕಾಣಲು ಚಂದ್ರ ನಿದ್ದೆಗೆ ಜಾರಿದ್ದ. ಅಂದೊಂದು ಹೊಸತನದ ಕನಸ ಬೆನ್ನ ಹಿಡಿದು ಅವನು ಎದ್ದಿದ್ದ, ಬೆಳಗಿನ ಸೂರ್ಯನೊಂದಿಗೆ, ಮಲಗಿದ ಚಂದ್ರನೊಂದಿಗೆ, ಹೊಸದಿನದ ಹೊಸತು ಉದಯದೊಂದಿಗೆ, ಕ್ಷಣ ಕ್ಷಣದ ನಡುವಿನ ಸ್ಥಬ್ದ ಮೌನದೊಂದಿಗೆ.

     ಮೌನದೊಂದಿಗೆ ಅವರಿಬ್ಬರ ನಡೆ ಸಾಗುತ್ತಿತ್ತು. ಅವನು ಮತ್ತು ಅವನ ಗೆಳೆಯನವನು. ಮುಂದಡಿಯಿಡುವ ಹೆಜ್ಜೆ ಹೆಜ್ಜೆಗಳ ದನಿಮಾತ್ರ ನಿಶಬ್ದ ಮೌನಗಳ ಮುರಿಯುತ್ತಿತ್ತು, ಮತ್ತೆ ಅಲ್ಲಿ ಮೌನವೇರುತ್ತಿತ್ತು, ಶಬ್ದ ನಿಲ್ಲುತ್ತಿತ್ತು. ಮಳೆ ನಿಂತು ನೆನೆದಿದ್ದ ದಾರಿಯಲ್ಲಿ ನಡೆಯುತ್ತಾ ಬೆನ್ನವರೆಗೆ ಕೆಸರ ಎರಚಿದ್ದ ಚಪ್ಪಲಿಯನ್ನು ಅಲ್ಲಲ್ಲಿ ನಿಂತಿದ್ದ ಕೆಸರು ನೀರಲ್ಲಿ ಕಾಲದ್ದಿ ತೊಳೆದು ಮುಂದೆ ಸಾಗುತ್ತಿದ್ದರು. ಮಳೆಗೆ ತೊಯ್ದ ಮರ ಗಿಡಗಳಿಂದ ಮೈಮೇಲೆ ಬಿದ್ದ ನೀರಹನಿಗಳು ಅಲ್ಲಲ್ಲಿ ಚುಕ್ಕೆಯಿಟ್ಟಂತೆ ಕಾಣುತ್ತಿತ್ತು. ಅವರು ನಿಲ್ಲದೇ ನಡೆಯುತ್ತಿದ್ದರು ಅವರದೇ ಗುಂಗಿನಲ್ಲಿ, ಅವರವರ ಅಂದಾಜಿನಲ್ಲಿ, ಮುಂಜಾವ ಮಂಜುಗತ್ತಲಲ್ಲಿ, ಮಲೆನಾಡ ಮಳೆಯ ಮಣ್ಣಿನ ಹಾದಿಯಲ್ಲಿ, ಜೊತೆ ಜೊತೆಯಲಿ.

     ಜೊತೆ ಜೊತೆಯಲಿ ಅವನ ನಾಯಿ ಬೊಳ್ಳು ಸಹ ಅವರ ಜೊತೆ ನಡೆಯುತಿತ್ತು. ಒಮ್ಮೆ ಹಿಂದೆಲ್ಲೋ ಬಾಕಿಯಾಗಿ ನಿಂತಿದ್ದರೆ, ಮತ್ತೊಮ್ಮೆ ಓಡಿ ಅವರಿಗಿಂತ ಮುಂದೆ ಸಾಗಿರುತ್ತಿತ್ತು. ಹಿಂದಿನ ರಾತ್ರಿಯ ಧಾರಾಕಾರ ಮಳೆ ಧರೆಯನ್ನು ತೊಳೆದು ತಣ್ಣಗಾಗಿಸಿದ್ದರೆ, ಅವನೊಳಗಿನ ಅಶ್ರುಧಾರೆ ಮನಸನ್ನು ತೊಳೆದು ಹಗುರಾಗಿಸಿತ್ತು. ಬೊಳ್ಳುನ ಓಟದಂತೆ ಅವನ ಮನದೊಳಗೂ ಕಳೆದ ಸಮಯದ ಹುಚ್ಚು ನೆನಪು ಓಡಹತ್ತಿತ್ತು, ಅವರಿಂದಲೂ ಮುಂದೆ, ಮುಂದಿದ್ದ ಬೊಳ್ಳುಗಿಂತಲೂ ಮುಂದೆ.

     ಮುಂದೆ ಅವಳು ನಡೆಯುತ್ತಿದ್ದಳು, ಅವನು ಹಿಂದೆ. ಅಂದಿನವರೆಗವರು ಬರಿಯ ಸ್ನೇಹಿತರು. ಆದರಂದು ವರುಷಗಳ ಸ್ನೇಹಸಂಬಂಧವನ್ನು ಮುರಿದು ಅವರು ಸಂಗಾತಿಗಳಾಗಬೇಕೆಂಬುದು ಅವಳ ಹಿರಿಯರ ಹಂಬಲ, ಇಂಗಿತ,  ನಿರ್ಧಾರವೂ ಸಹ. ಕ್ಷಣ, ಘಳಿಗೆಯೂ ಅಂತಹುದೊಂದು ಸಂದರ್ಭದ, ಸಂಬಂಧದ ಬಗೆಗೂ ಯೋಚಿಸದವನಲ್ಲಿ ತುಮುಲ, ತಳಮಳ, ಆಶ್ಚರ್ಯ, ಅಯೋಮಯ. ನಿಮಿಷಗಳ ಹಿಂದೆ ಅವರೇನಾಗಿದ್ದರೋ ಆಗದಿಂದ ಅವರು ಅವರಾಗಿ ಉಳಿದಿರಲಿಲ್ಲ. ಅವನೊಳಗೆ ಅರಿಯಲಾರದಂತಹುದೊಂದು ಪ್ರಣಯಸಂವೇದಿ ಭಾವನೆ ಹುಟ್ಟುಹಾಕಿದ್ದ ಅವನ ಪ್ರಾಣ ಸ್ನೇಹಿತ, ಹಾಗೆಯೇ ಅವಳೊಳಗೂ, ಅವರಿಬ್ಬರೊಳಗೂ.

     ಅವರಿಬ್ಬರೊಳಗೂ ಹೇಳಿಕೊಳ್ಳಲಾಗದ ಉದ್ವೇಗ, ಕಾತರ, ತೋರ್ಪಡಿಸಲಾಗದ ತಹತಹಿತ, ಹಿತವಾದ ಆನಂದ ಸನ್ನಿಹಿತ. ಅವಳಲ್ಲೂ ಅವನೆದೆಯ ಭಾವನೆಗಳೇ ಅವನೆಡೆಗಿವೆಯೆಂದು ಅವನ ಗೆಳೆಯನಿಂದ ತಿಳಿದ ಮೇಲಂತೂ ಅವನು ಅವನನ್ನೇ ಮರೆತಿದ್ದ. ಹಳೆಯ ನೆನಪಿನ ಹೊಸತು ಸಂಬಂಧ, ಕಳೆದ ಕಾಲದ ನವೀನ ಆನಂದ ಎಲ್ಲವೂ ಬದಲಾಗಿ ಬಣ್ಣತುಂಬಿದ ಚಿತ್ರವಾಯಿತು. ಚಿತ್ರದೊಳಗೆ ರೂಪಾಂತರವಾಗಿ ಮನ ಹಾರಲಾರಂಭಿಸಿತು, ಅವನಾಗಿ, ಅವಳಾಗಿ, ಅವನ ಅವಳಾಗಿ, ಅವಳ ಅವನಾಗಿ. ಕಳೆದು ಹೋಗಿದ್ದ ಅವನೊಳಗೇ ಅವನು ಆನಂದತುದಲಿತನಾಗಿ.

     ಆನಂದತುದಲಿತನಾಗಿ ಅವಳೊಂದಿಗೆ ಮನಸ್ಸು ಮಾಡಿ ತನ್ನ ಮನದಿಂಗಿತ ಬರಿದು ಮಾಡಿದ್ದ. ಅಂದಿನವರೆಗೂ ಅಂತಹಾ ಭಾವನೆಗಳ ವಶವಾಗಿರದ ಅವಳು ಭಾವಪರವಷವಾಗಿ ಅವನೊಂದಿಗೆ ಮಾತು ಮುಂದುವರೆಸಿದ್ದಳು. ನಿನ್ನೆಯದಲ್ಲವೆಂದೆನಿಸುವ ಇಂದು, ನಿನ್ನೆಯವರಲ್ಲವೆಂದೆನಿಸುವ ಅವರ ಸಹಚರ್ಯ, ಸಾಂಗತ್ಯ, ನಿನ್ನೆಯದೆಲ್ಲ, ನಿನ್ನೆಯವರೆಗಿನದ್ದೆಲ್ಲ, ನಿನ್ನೆಗೇ ಅದು ಅಂತ್ಯ ಎಂದೆನಿಸಲಾರಂಭಿಸಿತ್ತು ಅವಳಲ್ಲಿ. ಬರಿಯ ವರುಷಗಳ ಪರಿಚಯ, ಒಡನಾಟಗಳೆಲ್ಲ ಜನುಮಗಳ ಗಾಢ ಬಂಧನ, ನೆನಪ ನಿತ್ಯ ಸಾಗರವೆಂಬಂತೆ ಅವನಲ್ಲಿ ಮೂರ್ತವಾಗಲಾರಂಭಿಸಿತ್ತು. ಧಮನಿ ಧಮನಿಯಲ್ಲೂ ಅಮೂರ್ತ ಅಮೃತ ಸಂಚಾರವಾದಂತೆ, ಅವಳೆಡೆಗಿನ ಯೋಚನೆಯೇ ರೋಮಾಂಚನ ತಂದಂತೆ ಭಾಸವಾಯಿತು. ಹಗಲು ರಾತ್ರಿಗಳೆರಡೂ ಒಂದಾದಂತೆ, ಕ್ಷಣ ಕಾಲ ನಿಂತಂತೆ, ಅವಳಿಲ್ಲದೆ ಬಾಳೇ ಇಲ್ಲವೆಂಬಂತೆ ಅವನಿಗೆ ತೋರಲಾರಂಭಿಸಿತ್ತು. ಆಯನಗಳಾಚೆ ಸಮಯ ಸರಿದಂತೆ, ಆ ನಯನಗಳಾಚೆ ಕನಸು ಕಂಡಂತಹಾ ಜೈತ್ರಭಾವ ಅವನ ತುಂಬಿತ್ತು. ಮತ್ತೆ ಮುನ್ನೂರು ಮಾತುಗಳಲಿ ಮನಸೆರಡೂ ಮುಳುಗಿತ್ತು ಜೊತೆಗೆ ರವಿಯ ಪ್ರಯಾಣ ಪಡುವಣದೆಡೆಗೆ ಸಾಗಿತ್ತು.

     ಸಾಗಿತ್ತು ಅವನ ನಡಿಗೆ ಅದೇ ಹಾದಿಯಲ್ಲಿ, ಅವನ ಗೆಳೆಯನ ಜೊತೆ ಮತ್ತವನ ಬೊಳ್ಳುನ ಜೊತೆ. ಸೂರ್ಯೋದಯ ನೋಡಲು ಹೊರಟವರು ದಣಿವಾರಿಸಲು ದಾರಿ ಬದಿಯಲ್ಲೇ ಭಾಗಶಃ ಒಣಗಿದ್ದ ಕಲ್ಲುಬಂಡೆ ಏರಿ, ಕಾಲು ಇಳಿಬಿಟ್ಟು ಕುಳಿತರು. ಏನೋ ನೆನಪಾಗಿ ಹಿಂತಿರುಗಿ ಬಂದಂತೆ ಬೊಳ್ಳು ಓಡಿ ಬಂದವನೇ ಕಲ್ಲಿಗೊಂದು ಸುತ್ತು ಬಂದು, ಕಲ್ಲು ಏರಿ ಅವರೊಂದಿಗೆ ಕುಳಿತುಬಿಟ್ಟ. ನಿಮಿಶಗಳ ನಂತರ ಮತ್ತೆ ಅವರ ನಡಿಗೆ ಮುಂದುವರೆಯಿತು. ಉದಯಿಸುವ ಸೂರ್ಯನನ್ನು ಕಾಣಲು, ಬೊಳ್ಳುನ ತಿರುಗಾಟದ ಹುಚ್ಚು ತಣಿಸಲು, ಗೆಳೆಯನೊಡನೆ ಮನಸಾರೆ ಸಮಯ ಕಳೆಯಲು.

     ಕಳೆಯಲು, ಕೂಡಲು, ಗುಣಿಸಿ, ಭಾಗಿಸಲೂ ಸಿಗದ, ಲೆಕ್ಕವಿಲ್ಲದ, ಲೆಕ್ಕಕ್ಕೆ ಸಿಗದ, ಪ್ರೀತಿಯ ಲೆಕ್ಕಾಚಾರವನ್ನು ಲೆಕ್ಕ ಸಿಗದಷ್ಟು ಸಾರಿ ಮಾಡಿದರೂ ಲೆಕ್ಕ ತಪ್ಪಿ ಮತ್ತೆ ಲೆಕ್ಕವಿಡಲಾಗದೆ ಸಾಕಾಗಿ ಸೋತು ಅವನು ಸುಮ್ಮನಾದ. ತನ್ನ ಮನದಿಂಗಿತವನ್ನು ಮನೆಯವರಲ್ಲಿ ಹೇಳಿ ನಂತರ ಮುಂದಿನ ಹೆಜ್ಜೆಯ ಯೋಚನೆ ಅವನದಾಗಿತ್ತು. ಹಾಗೆಯೇ ತನ್ನ ಆಸೆ, ಆಶೋತ್ತರಗಳನ್ನೆಲ್ಲ ಅವರೆದುರು ಹೇಳಿಕೊಂಡು ಅವರ ಅನುಮತಿಯ ಅಪೇಕ್ಷೆಯಲ್ಲೇ ಕಾತರದಿಂದ ನಿಂತವನು, ನಾಳಿನ ನೂರು ಕನಸುಗಳ ಕುದುರೆಯೇರಿ ಆಕಾಶಕ್ಕೆ ಜಿಗಿದಿದ್ದ. ಅಷ್ಟರೊಳಗೆ ಅಮ್ಮನ ಕಣ್ಣೀರ ಹನಿ ಒಂದೊಂದಾಗಿ ನೆಲ ಸೇರಲಾರಂಭಿಸಿತ್ತು. ಉತ್ತರ ಕಾಣದ ಪ್ರಶ್ನೆಯೊಂದಿಗೆ ಗುದ್ದಾಡುವ ಪ್ರಯತ್ನದಲ್ಲೂ ಸೋತು, ಕಾರಣವೇನೆಂದು ನೇರವಾಗಿ ಕೇಳಿದ್ದನು. ಮನದ ಕ್ಷೋಭೆಯನ್ನು ಮಗನಲ್ಲಿ ಹೇಳಲೂ ಆಗದೆ, ಅನ್ಯ ಕುಲದವಳನ್ನು ಒಪ್ಪಿಕೊಳ್ಳಲೂ ಆಗದೆ, ವಾಸ್ತವದ ಪರಿಹಾಸಕ್ಕೆ ಸಿಕ್ಕು, ಆಚಾರ ವಿಚಾರದ ಉರುಳಲ್ಲಿ ಬಿದ್ದು ಹೊರಬರಲೂ ಆಗದೆ, ಮಗನ ಕನಸಿನ ಚಿಗುರನ್ನು ಚಿವುಟಲೂ ಮನಸಾಗದೆ, ಮನದೊಳಗಿನ ಆರ್ದತೆ ಅಶ್ರುವಾಗಿ ಹೊರಬಂದಿತ್ತು. ಸದ್ದಿಲ್ಲದೆ ಒಳನಡೆದಿದ್ದಳು, ಉತ್ತರವ ಬಯಸುತ್ತ ನಿಂತ ಅವನ ಹತ್ತಿರವೇ ನಿಂತೂ ನಿಲಲಾಗದೆ ಕುಸಿದು ಕುಳಿತಳು, ಕಾತರದ ಪ್ರಶ್ನೆಗೆ ಅವನ ಅಮ್ಮ ಮಾರ್ಮಿಕ ಉತ್ತರವಿತ್ತಿದ್ದಳು. ಮರುಕ್ಷಣದ ಉದ್ವಿಗ್ನ ಉದ್ವೇಗಗಳನ್ನೆಲ್ಲ ಬಲವಂತವಾಗಿ ಉಪಶಮನ ಮಾಡಿ, ಮರುಕ ಮನವನ್ನು ಅಳಿಸಿ ಹಗುರಾಗಿಸಿದ್ದ, ಉತ್ತರವ ಮತ್ತೆ ಪ್ರಶ್ನೆ ಮಾಡಿದ್ದ. ಮನದ ಬೇಗುದಿಗಳಿಗೆ ಬೇಸರವ ಉಣಬಡಿಸಿ, ತನ್ನೊಳಗೆ ಅವಳಿಗೊಂದು ಮಹಲು ಕಟ್ಟಿದ್ದ, ಜೀವದುಸಿರಿನ ಹಣತೆ ಉರಿಸಿದ್ದ. ತನ್ನೊಳಗೆ ತನ್ನತನ ಅವನು ಹುಡುಕುತ್ತಿದ್ದ.

     ಹುಡುಕುತ್ತಿದ್ದ ಸೂರ್ಯ ಹಿತವಾಗಿ ಕಾಣಲಾರಂಭಿಸಿದ್ದ, ಅಲ್ಲಿನ ಪೊದರು ಗಿಡಮರಗಳ ಹಿಂದೆ ಅಡಗಿದಂತೆ ಕಂಡು, ದೂರದ ಗುಡ್ಡೆಯ ಹಿಂದಿನಿಂದ ಮೆಲ್ಲಗೆ ಮೂಡಲಾರಂಭಿಸಿದ್ದ. ಮುಂಜಾನೆಯ ತಂಪು ಕಿರಣಗಳನ್ನೆಲ್ಲ ದಿಕ್ಕು ದಿಕ್ಕಿಗೆ ಎಸೆದು ಬೆಳಗನ್ನು ಎಲ್ಲರಿಗೂ ಮುಟ್ಟಿಸಲು ನಗುತ ಬರುತಿದ್ದ. ಅವರು ಇವರೆನ್ನದೆ, ಭೂಮಿ ಆಕಾಶವೆನ್ನದೆ, ಊರು ಕಾಡೆನ್ನದೆ, ಜಾತಿ ವಿಜಾತಿಯೆನ್ನದೆ ಎಲ್ಲರನೂ ಬಯಸುವವ, ಎಲ್ಲರೂ ಬಯಸುವವ ಪಡುವಣದಿ ಪುರುಸೊತ್ತಿಲ್ಲದೆ ಪ್ರಕಾಶಿಸುತ್ತಿದ್ದ.  ಜಾತಿ ಸ್ವಜಾತಿ, ಕುಲ ಗೋತ್ರಗಳ ಗುಂಗಿನಲ್ಲಿ, ಮಗನ ಮನಸ್ಸನ್ನು, ಪ್ರೀತಿಯ ಹಂಬಲಗಳನ್ನೆಲ್ಲ ಗೌಣವಾಗಿಸಿದ್ದ ಅಮ್ಮನ ಮುಗ್ಧ ಮನಸ್ಸು ಸೂರ್ಯನ ಜಾಜ್ವಲ್ಯ, ಅಗಾಧ ಪ್ರಕಾಶದೆದುರು ಕ್ಷಣ ಕ್ಷೀಣವಾದಂತೆ ಅವನಿಗನಿಸಿತು. ವರ್ಣವಿಹೀನ ವರ್ಣ ವರ್ಣನಾನೀತಿ ವೃಣದಂತೆ ಅವನಲ್ಲಿ ಮೊಳೆಯಲಾರಂಭಿಸಿತ್ತು. ಮನಸಾರೆ ಮನದ ಮಾತಿನಂತೆ ಸತ್ವವಿಹೀನ ಸಾಮಾಜಿಕ ಕಟ್ಟಳೆಗಳನ್ನು ಚೂರು ಚೂರು ಮಾಡಬೇಕೆಂದು ಕಂಡರೂ ಅಮ್ಮನ ನಿತಾಂತ ಪ್ರೀತಿಯ ಮುಂದೆ ಸಮಾಜವೂ ಸಾಮಾನ್ಯವಾಗಿ ಕಂಡಿತ್ತು. ಬದುಕು ನೀಡಿದ ತಾಯಿ, ಮಮತೆ ಬಡಿಸಿದ ಮಾತೆ, ಮನದಲ್ಲಿ ನಿಲುವ ನಲ್ಮೆಯಾಗಿದ್ದವಳೇ ಮೊದಲಾಗಿ ಕಂಡಳು. ಅನಂತ ಪ್ರಶ್ನೆಗಳ ವಿಸ್ತಾರ ವಿಶ್ವದಲಿ ವಿಕ್ಷಿಪ್ತ ವಿಚಾರಧಾರೆಗಳ ಮಥನ ಅವನ ಚಿತ್ತ ಕೆಡಿಸಿತ್ತು. ಒಳಮನಸ ಒದ್ದಾಟ ತಾಕಲಾಟದ ತಾಳ ತನ್ನಷ್ಟಕ್ಕೇ ತಟಸ್ಥವಾಯಿತು. ನಿಮಿಶಗಳ ನೀನಾದ, ಅಂತರಾಳದ ನಿರ್ಲಿಪ್ತ  ಸಂವೇದ ವೇಗ ಕಳೆದುಕೊಂಡು ಸ್ಥಬ್ದವಾಯಿತು. ನೆನಪಾಗಿ ಅವನೊಳಗೆ ಮಡುಗಟ್ಟಿತು, ಅಲ್ಲಿಯೇ ಕೊನೆಯಾಯಿತು.

     ಕೊನೆಯಾಯಿತು, ಕೊನೆಕಂಡಿತು ಅವನ ಆಂತರ್ಯದ ಅನುರಣನ. ಅರುಣೋದಯದ ಅನುಭಾವ ಅನನ್ಯವಾಗಿ ಅವನೊಳಗೆ ಹರಿಯಲಾರಂಭಿಸಿತ್ತು. ಒಳಮನದ ಇರುಳ ಬೆಳಕಾಗಿಸಿತ್ತು. ಉತ್ತರವಿಲ್ಲವೆಂದೆನಿಸಿದ್ದ ಪ್ರಶ್ನೆಗೆ ಉತ್ತರ ದೊರಕಿತ್ತು, ಅತ್ತ ಮನಸು ನಿರಾಳ ನಗು ನಕ್ಕಿತ್ತು. ಮುಂಜಾವಿನ ಮೃದುಲ ತಂಗಾಳಿ ತನುಮನವ ಮರಳಿ ಹಗುರಾಗಿಸಿತ್ತು. ಗೆಳೆಯನೆಡೆಗಿನ ಅವನ ಗೆಳೆತನದ ಅನುಬಂಧ ಅನುಕ್ಷಣವೂ ಅಬೇಧ್ಯ, ಅತೀತವಾಗುತ್ತಿತ್ತು. ದೂರದಲಿ ಓಡುತ್ತ ಬೊಳ್ಳು ಬೊಗಳುತ್ತಿದ್ದ, ಗೆಳೆಯನೂ ಬೊಳ್ಳುನ ಬೆನ್ನುಹತ್ತಿದ್ದ. ಪ್ರಕೃತಿಯೊಂದಿಗೆ ಪರವಶವಾಗಿ ಅವನು ಪರಕಾಯ ಪ್ರವೇಶಿಸಿದ ಆನಂದ ಕಂಡ. ಹೊಸತು ಹೆಜ್ಜೆಯ ನಡೆಯೊಂದಿಗೆ ಅವನು ನಡೆಯಲಾರಂಭಿಸಿದ್ದ ಮರಳಿ ಮನೆಯ ಕಡೆಗೆ, ಅನಿಕೇತನ ಅಂತರಂಗದ ಕಡೆಗೆ, ಮೆಲ್ಲನೆ . . . ಅವನ ಗೆಳೆಯನ ಕಡೆಗೆ, ಅವನ ಬೊಳ್ಳುನ ಬಳಿಗೆ.