Jan 9, 2014

ಸತ್ತ ಕನಸ ಸೂತಕದೊಳಗೆ, ಹೊಸತು ಕನಸ ಸೃಷ್ಟಿಯಾಚೆಗೆ

     ಅವಳ ಹೆಸರ ಹಿಡಿದೂ ಕರೆಯಲಾಗದ ಹಿಂಜರಿಕೆ ಅವನಲ್ಲಿತ್ತು. ತಾನು, ತನ್ನದೆಂದು ಪ್ರಪಂಚವೇ ತನ್ನದಾಗಿಸಿಕೊಂಡವನಲ್ಲಿ, ಹತಾಶ, ನಿರ್ಲಿಪ್ತ ಏಕಾಂತತೆಯ ಒಂಟಿತನವನ್ನು ಜತೆಯಾಗಿಸಿದ್ದವಳ ನೆನಪನ್ನು ಮರೆಯಲೂ ಆಗದ ವೇದನೆ ಅವನ ತುಂಬಿತ್ತು. ಸೋಲನ್ನು ಸೋಲಿಸ ಹೊರಟವನ ಬೆನ್ನಹಿಡಿದಿದ್ದವಳು ಸೋಲನ್ನೇ ಅವನು ಹೆಗಲೇರಿಸಿಕೊಂಡು ನಡೆವವನಂತಾಗಿಸಿದ್ದಳು. ತನ್ನೊಳಗಿನ ನಿಶ್ಚಲ, ನಿರ್ವಿಕಲ್ಪ ಯೋಚನಾಲಹರಿಯನ್ನು ನಿಯಂತ್ರಿಸಲಾಗದೆ, ದನಿಯಾಗಿ, ಪ್ರತಿದನಿಯೊಳಗೆ ಕಳೆದು ಹೋಗುವಂತಾಗಿಸಿದ್ದಳವಳು. ಅದೆಷ್ಟೋ ಸಾವಿರ ದಿನಗಳ ನಂತರ,  ಅದೆಷ್ಟೋ ಸಾವಿರ ಸಾವಿರ ಹೆಜ್ಜೆಗಳ ಎಡೆಯಲ್ಲಿ ಅಂದವರು ಎದುರು ಬದುರಾಗಿ ಅಲ್ಲಿ ನಿಂತಿದ್ದರು. ಕಣ್ಣು – ಕಣ್ಣು ಸೇರಿದಾಗ, ಆ ಕ್ಷಣಗಳು ಅವರು ನಡೆದು ಮರೆತಿದ್ದ ಹೆಜ್ಜೆಗಳಾಚೆಗೆ ನಡೆಸಿದ್ದವು ಒಂದೊಂದೇ ಹೆಜ್ಜೆ.

     ಒಂದೊಂದೇ ಹೆಜ್ಜೆ ಮೇಲೊಂದು ಹೆಜ್ಜೆಯಿಡುತ್ತಾ, ಅವನ ಹೆಜ್ಜೆಗುರುತನ್ನು ತನ್ನದಾಗಿಸುತ್ತಾ ಅವಳು ಹಿಂಬಾಲಿಸುತ್ತಿದ್ದಳು ಅವನನ್ನು ಆ ಕಡಲ ತೀರದಲ್ಲಿ. ಉಕ್ಕಿ ಬರುವ ಕಡಲ ಉನ್ಮತ್ತ ಅಲೆಗಳು ಆ ಹೆಜ್ಜೆಯ ಗುರುತುಗಳ ಮೇಲೆ ತನ್ನ ಹೆಜ್ಜೆಯಿಡುತ್ತಿತ್ತು ಅವರನ್ನು ಹಿಂದಿಕ್ಕುತ್ತಾ. ಉಸುಕಿನಲ್ಲಿ ಅಡಗಿದ್ದ ನೀರ ಪಸೆ ಹೆಜ್ಜೆಯ ಭಾರಕ್ಕೆ ಹೊರ ಉಕ್ಕುತ್ತಿದ್ದರೆ ನೀರ ಅಲೆಗಳು ಮತ್ತೆ ಅಲ್ಲಿ ನೀರ ತುಂಬುತ್ತಿತ್ತು. ಅವನೊಳಗೆ ಅವಳೆಡೆಗಿನ ಪ್ರೀತಿ ಕಡಲಾಗುತ್ತಿದ್ದರೆ, ಅವಳೊಳಗೆ ಅಂಥದ್ದೇ ಅಲೆಗಳು ತಾಕಲಾಟ ನಡೆಸುತ್ತಿದ್ದವು, ಒಂದರ ಮೇಲೊಂದು ನಿರಂತರ.

     ನಿರಂತರ ಹಾಡುವ ಕೋಗಿಲೆ ಕೇಳುವವರ ಮನಗಳಿಗೆ ಮುದ, ಕರ್ಣಗಳಿಗೆ ಇಂಪು ತರುವುದು, ಮನವ ಹಗುರಾಗಿಸಬಲ್ಲುದು. ಆದರೆ, ಉಳಿದವರು ಆನಂದಿಸುವ ಕೂಗು ತನ್ನ ವೇದನೆಯ ಸ್ವರವೆಂಬುದು ತನಗಲ್ಲದೆ ಇತರರಿಗೆ ಅರಿವೂ ಆಗದು, ಅದು ಕೋಗಿಲೆಯ ಆರ್ತನಾದವೆಂದು, ಕಳೆದ ತನ್ನವರ ಕರೆವ, ಕೂಗುವ, ಕಾಯುವ ತಹತಹಿತವೆಂದು. ಹಾಡು ಹಕ್ಕಿಯ ಹಾಡ ಹಿಂದಿನ ಮೌನದ ಅರಿವು ಯಾರಿಗೂ ಆಗದು. ಹಾಗೇ ಅವನ ಆನಂದದ ಹಿಂದಿನ ವಿಷಮ ವೇದನೆಯ ಅರಿವೂ ಆಗಿರಲಿಲ್ಲ ಉಳಿದವರಿಗೆ, ಅವನೊಂದಿಗಿದ್ದ ಅವಳಿಗೆ.

     ಅವಳಿಗೆ ಅವನೊಂದಿಗಿನ ಕ್ಷಣ ಕ್ಷಣವನ್ನೂ ನೆನಪಾಗಿರಿಸಬೇಕೆಂಬ ಅಪರಿಮಿತ ಬಯಕೆ. ಯುಗಗಳು ಬದುಕಿರುವಷ್ಟೂ ಅವನ ಸಂಗಾತಿಯಾಗಿರಬೇಕೆಂಬ ಸವಿ ಬಯಕೆ. ಬೆರೆಸಲಾಗದ, ಒಂದಾಗದ ಬಣ್ಣಗಳನ್ನು ಬಲವಂತವಾಗಿ ಬೆರೆಸುವ ಪ್ರಯತ್ನದಲ್ಲಿ ಅವಳಿದ್ದಳು. ದಿನ ಕಳೆದಂತೆ ಬಣ್ಣಗಳು ಬೇರಾಗಿ ಮಾಸಲು, ಮಸುಕಾಯಿತೇ ವಿನಃ ಕಣ್ಗಳನ್ನು ಸೆಳೆಯಲಿಲ್ಲ, ಮನವ ಸೂರೆಗೊಳಿಸಲಿಲ್ಲ. ಒಂದಾಗದ ಕಾಂತಗಳಂತೆ, ಬೆಸೆಯಲಾರದ ಸಂಕಲೆಯಂತೆ, ಹತ್ತಿರವಿದ್ದೂ ಒಂದಾಗದಂತಿದ್ದರು ಆ ಯುಗಳ ಹೃದಯಗಳು.

     ಹೃದಯಗಳು ಬಡಿತ ಜೋರಾಗಿಸಿದ್ದವು, ಅಂದು ಅವರ ಸನಿಹ ಸಂಯಮ ಮೀರಿಸುವಂತಿತ್ತು. ಅವನ ಕೈಹಿಡಿದು ಕಾಣದಾಗಿ ಮತ್ತೆ ಮನಕೆ ಮರಳುವ ಕನಸು ಅವಳೊಳಗಿತ್ತು. ದೂರಾದ ದಾರಿಯ ಬಿಟ್ಟು, ತನ್ನದೇ ಹಾದಿಯಲ್ಲಿ ಮರಳಲಾಗದಷ್ಟು ದೂರ ಅವನು ಕ್ರಮಿಸಿ ಆಗಿತ್ತು. ಜೀವಿತವ ಬಯಸಿ ಪಡೆಯದ ಅವನು, ಪಡೆದ ಜೀವಿತವ ಬಯಸದ ಅವಳು ವಾಸ್ತವತೆಯ ವಿಚಿತ್ರ ವಸ್ತುಗಳಾಗಿ ಉಳಿದುಬಿಟ್ಟರು. ಜೊತೆಯಾಗಿದ್ದ ಒತ್ತಾಯದ ಸಂಬಂಧದ ಬಂಧನದಿಂದ ಬಿಡುಗಡೆಯಾಗಿ, ಅವನ ಕೈಹಿಡಿಯುವ ಒತ್ತಾಸೆ, ನಿರೀಕ್ಷೆಗಳು ನಿಜವಾಗದೆಂದೆನಿಸುವ ಯೋಚನೆ ನಿಜವಾಗುತಿತ್ತು ಅವಳ ಅಂತರಂಗದಲ್ಲಿ.

     ಅಂತರಂಗದಲ್ಲಿ ದಿಗಿಲು ಒಂದೆಡೆ, ಅವನು ತನ್ನವನಾಗಲಿಲ್ಲವೆಂಬ ಅಳಲು ಇನ್ನೊಂದೆಡೆ. ಹಿರಿಯರ ಒತ್ತಾಯದಲ್ಲಿ ಅವರು ನೆನೆಸಿದವನೊಂದಿಗೆ ಬಾಳ ದಾರಿ ನಡೆಯುವ ಪ್ರಯತ್ನವಾಗಿ ಅಂದು ಅವಳು ಹಸೆಯೇರಿದ್ದಳು. ಆಗಮಿಸಿದವರೆಲ್ಲರೂ ಹರಸಿ - ಹಾರೈಸಿ ನಡೆದರೂ ಅವನ ಬರವಿರಲಿಲ್ಲ. ಅವನ ನೆನಪಲ್ಲಿ ಮಿಂದು, ಅವನನ್ನು ಮನದಿಂದ ದೂರವಿಡುವ ಸಾವಿರ ಪ್ರಯತ್ನ ಮಾಡಿಯೂ ಸೋತಿದ್ದಳು. ಸೋಲನ್ನು ಗೆಲುವಾಗಿ ಕಾಣಲಾರಂಭಿಸಿದಳು. ಹೊಸ ಹೃದಯದ ಪ್ರೀತಿ, ಆಪ್ಯಾಯತೆ, ಅನ್ಯೋನ್ಯ ಆಪ್ತತೆ ಅವಳಿಂದ ಅವನನ್ನು ಮೆಲ್ಲನೆ ಮರೆಸುತಿತ್ತು. ಬಲವಂತದ ಸಂಬಂಧವನ್ನು ಬಲವಾಗಿ ಸಹಿಸಿ ಬದಲಾಯಿಸುತ್ತಾ, ಬದಲಾಗುತ್ತಾ, ಬಾಹುಬಂಧನದ ಬಿಸಿಯೊಳಗೆ ಕರಗಿ, ಕಾಣದವನನ್ನು ಬಿಟ್ಟು, ಕಾಣುವ, ಜೊತೆಗೆ ನೆರಳಾಗಿ ನಡೆಯುವ ನಿಜವನ್ನು ಹತ್ತಿರವಾಗಲಾರಂಭಿಸಿದಳು. ಹೊಸ ಹಾದಿಯನ್ನು ಹಿಡಿದು ಹೊರಟವಳು ಪರಿವರ್ತನೆಯ ಪರಿಭ್ರಮಣದಲ್ಲಿ ಸಿಕ್ಕಿ, ತನ್ನತನವನ್ನು ತನ್ನಿಂದ ದೂರಾಗಿಸಿ, ಸಮಯದ ನಡೆಯೊಂದಿಗೆ ಹೊಸ ಹೆಜ್ಜೆಯಿಡಲಾರಂಭಿಸಿದ್ದಳು. ಭೂತ ಭವಿಷ್ಯದ ರೇಖೆಗಳ ಮರೆತು ವರ್ತಮಾನದ ಸಂಜ್ಞೆ ಮೀರಲಾರದೆ ಬದುಕ ರೂಪಿಸಲಾರಂಭಿಸಿದ್ದಳು. ಮರೆತವನ ಮರೆಯುತ್ತ, ಜೊತೆಯವನ ನೆನೆಸುತ್ತ ಮತ್ತೆ ಮುಂದಡಿಯಿಡುತ ನಡೆಯುತ್ತಿದ್ದಳು ಅವಳು.

     ಅವಳು ಅವನ ಹತ್ತಿರವಾಗಿ, ಕನಸ ಕಟ್ಟಿ, ಆಸೆ ಉಕ್ಕಿಸಿ, ಬದುಕ ರೀತಿಗೊಂದು ಹೊಸ ಆಯಾಮ ಇತ್ತವಳು. ಜೀವಿತದ ಚಲನೆಗೊಂದು ದಿಶೆಯ ತೋರಿದವಳು. ಅವನ ಸ್ವಂತಿಕೆಗೊಂದು ನೆರಳು ನೀಡಲು ಸಹಕಾರಿಯಾದವಳು. ಇಂಥೆಲ್ಲದರೊಂದಿಗೆ ಅವನಲ್ಲಿ ತನ್ನ ಪ್ರೀತಿಯ ಬಳ್ಳಿಗೊಂದು ಆಸರೆ ಬಯಸಿ, ತನ್ನ ಮನದಿಂಗಿತ ಅರುಹಿ ಸೋತಿದ್ದಳು. ತನ್ನ ಜೀವನಕ್ಕೊಂದು ಅರ್ಥ ತಂದಿದ್ದ ತನ್ನ ಬಾಳ ಶಿಲ್ಪಿಗೊಂದು ಅವನು ಎತ್ತರದ ಸ್ಥಾನವಿತ್ತಿದ್ದ. ಮನದ ನಡುವಲ್ಲೊಂದು ಗೌರವದ ಜಾಗ ಕೊಟ್ಟಿದ್ದ ಧನ್ಯತಾ ಭಾವದಿಂದ, ಮನದಿ ಅರ್ಪಣಾ ಭಾವದಿಂದ. ಅವನ ಆಂತರ್ಯದ ಆಶಯಗಳ ಅರಿವಿಲ್ಲದೆ, ಸ್ವಾರ್ಥದಿಂದ  ಅವನ ಸ್ವಂತವಾಗುವ ಕನಸ ಕಂಡಿದ್ದಳು. ಅವಳ ಮನದ ಅಂಕುಶವಿಲ್ಲದ ಆಸೆಗಳಿಗೆ ಅವನ ವಿನಮ್ರ ನಿರಾಕರಣೆಯೊಂದೇ ಕೊನೆಯ ಉತ್ತರವಾಗಿತ್ತು. ಅವನನ್ನು ಶೂನ್ಯದಿಂದ ಅನಂತವಾಗಿದ್ದವಳು ಅವನ ಸಮರ್ಪಣೆಯೆದುರು ಶೂನ್ಯವಾಗಿ, ಶಕ್ತಿಕುಂದಿ, ಸೂತ್ರ ಹರಿದ ತೊಗಲುಗೊಂಬೆಯಂತಾದಳು. ಅವ್ಯಕ್ತ ಪ್ರೇಮದ ವ್ಯಕ್ತ ಸಂವೇದನೆ ಅವಳನ್ನು ಮುಳ್ಳಿನಂತೆ ಇರಿಯಲಾರಂಭಿಸಿತ್ತು, ಅವನನ್ನು ದ್ವೇಶಿಸಿ ದೂರ ಮಾಡುವವರೆಗೆ, ಅವನಿಂದ ದೂರ ಬಲು ದೂರ ನಡೆಯುವವರೆಗೆ, ಅವನನ್ನು ಮರೆಯುವವರೆಗೆ.

     ಮರೆಯುವವರೆಗೆ ಅವರಿಬ್ಬರೂ ಅಂದು ನಕ್ಕಿದ್ದರು, ನಕ್ಕು ಮನಸ ಭಾರ ಹಗುರಾಗಿಸಿದ್ದರು ಅಲ್ಲಿ ಎದುರಾದಂದು. ಕಳೆದ ಕಹಿ ಘಳಿಗೊಂದು ಅಂತ್ಯವಿರಿಸಿ, ಹೊಸತು ಸಿಹಿ ನಿಮಿಶಗಳ ಆಸ್ವಾದಿಸಿದ್ದರು. ವಿಷಮ ದ್ವೇಷದ ಬೆನ್ನಹಿಡಿದು ವೃಥಾ ಅಮೃತವನ್ನು ವಿಷವಾಗಿಸಿದ್ದಳು, ವಿಷಾದ ಭಾವನೆಯಿಂದ ಸ್ವಯಂ ಮರುಗಲು ಅವಳೊಳಗಿನ ಅವಳೇ ಕಾರಣವಾಗಿದ್ದಳು. ಮನದಿರುಳ ದೂಡುವ ಆಸೆಗೆ ಮರುಳು ಮನಸ್ಸಿಗೆ ಮರುಳಾಗಿ ವಾಸ್ತವದಿ ಕುರುಡಳಾಗಿದ್ದಳು ಅವನ ಪ್ರೀತಿಯ ಬಿಸಿಲ್ಗುದುರೆಗೆ, ಕನಸಲ್ಲೇ ಕಹಿ ನೆನಪನ್ನೆಲ್ಲ ಕಳೆದಿದ್ದಳು ಕಣ್ಣೆವೆಯ ದಾಟುವ ಭಯದೊಳಗೆ, ಸತ್ತ ಕನಸ ಸೂತಕದೊಳಗೆ, ಹೊಸತು ಕನಸ ಸೃಷ್ಟಿಯಾಚೆಗೆ, ಆದಿ ಅಂತ್ಯವಿಲ್ಲದ ಅವಳ ಅಪೂರ್ಣ ಕಥೆಯ ಸಾಲುಗಳೊಂದಿಗೆ…..