Nov 27, 2010

ಮರೆವ ನಿನ್ನೆಯ ಹೆಜ್ಜೆಗಳೆಡೆಯಲ್ಲಿ...

ಬೆಳಗಿನಿಂದ ನೆಲಸೇರಿದ್ದ ತರಗೆಲೆಗಳೆಲ್ಲ ಚದುರಿ ದೂರ ಬೀಳುತ್ತಿತ್ತು. ಗಾಳಿ ಮತ್ತೊಂದಷ್ಟು ಹಣ್ಣೆಲೆಗಳನ್ನು, ಚಿಗುರೆಲೆಗಳನ್ನೂ ನೆಲ ಸೇರಿಸುತ್ತಾ ಸಾಗಿತ್ತು. ಕಾಲ ಕೈಬಿಟ್ಟಿದ್ದ ಎಲೆಗಳು ನಡೆವ ಕಾಲಡಿ ಬಿದ್ದು ನಿಸ್ಸಹಾಯಕ ನಿಟ್ಟುಸಿರಿಟ್ಟು ಉಸಿರು ಬಿಟ್ಟಿದ್ದವು. ನಡೆವ ನಡೆಗಳಿಗೆ ಮೆತ್ತನೆಯ ಸುಖಾನಂದವೀಯುತ್ತಿದ್ದವು. ಚಿಗುರೊಡೆದ ಪುಟ್ಟ ಹಸಿರೆಲೆಗೆ ಬದುಕಲು ಜಾಗ ಬಿಟ್ಟಿದ್ದವು, ಮರದೊಳಗೆ ಮತ್ತೆ ಕನಸಾಗಿ ಹುಟ್ಟಿದ್ದವು. ಇಂಥಾ ವಿಕ್ಷಿಪ್ತ, ವರ್ಣನಾತೀತ ತರಂಗಗಳ ನಡುವೆಯೂ ವಿವರಿಸಲಾಗದ ನೂರು ಯೋಚನೆಗಳು ಅವಳೊಳಗೆ ಬೇರು ಬಿಟ್ಟಿದ್ದವು. ಅಲ್ಲೊಮ್ಮೆ ಸುಳಿದ ತಂಗಾಳಿ ಅವಳ ಮುಂಗುರುಳನ್ನು ಮುದ್ದಿಸಿ ಮಾಯವಾಯ್ತು. ಅವನ ಮನದೊಳಗೆ ಅವರ ಕನಸು ಮಾಸದ ಗಾಯವಾಯ್ತು, ಅವಳಲ್ಲಿ ಬತ್ತದ ಕಂಬನಿಯಾಯ್ತು, ಪ್ರೀತಿಯ ಹೊಸತೊಂದು ಕಥೆಯಾಯ್ತು.

ಕಥೆಯಾಯ್ತು, ಕವನವಾಯ್ತು, ಪ್ರೀತಿ ಜೊತೆಯಲ್ಲಿ ಅವರ ಕನಸು ನವಿಲುಗರಿಯಾಯ್ತು. ನೆನಪ ಪುಸ್ತಕದ ಪುಟ ಪುಟದ ನಡುವೆ ಬಚ್ಚಿಟ್ಟು, ಮರಿಯಿಟ್ಟು ನೂರಾಯ್ತು. ಬಣ್ಣ ಬಣ್ಣದ ಕಣ್ಣು ಬಣ್ಣ ತುಂಬುತ ಅವರ ಮನಸ ತುಂಬಿತ್ತು. ಕಾತರಿಸುವ ಕ್ಷಣಗಳು ಅವರೊಳಗೆ ದಿನದಂತಾಗುತ್ತಿದ್ದರೆ, ಜೊತೆಯಿರುವ ದಿನಗಳು ನಿಮಿಷದಂತೆ ಕಳೆಯುತಿತ್ತು. ಅವರಲ್ಲಿ ನಿನ್ನೆಯ ನೆನಪಿರಲಿಲ್ಲ, ನಾಳೆಯ ಮಾತಿರಲಿಲ್ಲ, ವಾಸ್ತವವೇ ಆನಂದದ ದಿನವಾಗಿರುತ್ತಿತ್ತು. ಅವಳ ಕಣ್ಣ ನೋಟಗಳಲೇ ಕಳೆದು ಹೋಗುತ್ತಿದ್ದ ಅವನು, ಅವನ ಮಾತ ಮಂದಿರದೊಳಗೆ ಹಾದಿ ಮರೆಯುತ್ತಿದ್ದ ಅವಳು, ಬಾನ ಮೋಡದ ಜೊತೆಯ ಬಾನಾಡಿಗಳಂತಾಗಿದ್ದರು. ಲೋಕದ ಪರಿವೆಯನೆಲ್ಲ ಮರೆತ ಪ್ರಣಯಿಗಳಾಗಿದ್ದರು. ಅವಳ ಆಸೆಯಂತೆ ಮುಂದೊಂದು ದಿನ ಜೊತೆಯಾಗುವವರಿದ್ದರು, ಜೊತೆ ನಡೆಯುವವರಿದ್ದರು ಅವರಿಬ್ಬರು.

ಅವರಿಬ್ಬರು ಮಾತ್ರ ಅಲ್ಲುಳಿದವರು. ಪಶ್ಚಿಮ ಘಟ್ಟದ ಪರ್ವತ ಪಂಕ್ತಿಯ ಹಿಂದೆ ಸಂಜೆಯ ಸೂರ್ಯನ ಮೋರೆಯೂ ಕಾಣದಾಯ್ತು. ಮೆಲ್ಲ ಮೆಲ್ಲಗೆ ಅವರ ನೆರಳೂ ಕಾಣದಾಗದಾಯ್ತು. ಅವಳ ಕನಸೆಲ್ಲಾ ಕರಗಿ ಮಣ್ಣಾಗಿತ್ತು. ರಕ್ತ ಹೀರಿದ ಜಿಗಣೆ ಹಣ್ಣಾಗಿ ಬಿದ್ದು, ಕಚ್ಚಿದ್ದ ಜಾಗದಿಂದ ನೆತ್ತರಧಾರೆ ಧರೆ ಸೇರುತ್ತಿತ್ತು. ಕಣ್ಣೀರು ಖಾಲಿಯಾಗಿತ್ತು, ಅಲ್ಲಿ ದುಃಖ ಮಡುಗಟ್ಟಿತ್ತು. ಕಾಲುಗಳಿಗೆ ಹಿಡಿದಿದ್ದ ಜಿಗಣೆಗಳನ್ನು ಹೆದ್ದುಂಬೆ ಎಲೆಯಿಂದ ಒಂದೊಂದಾಗಿ ಬಿಡಿಸುತ್ತಿದ್ದ ಅವನು. ರಕ್ತದ ಬಿಸಿ ಹುಡುಕಿ ಗೇಣು ಹಾಕುತ್ತಾ ಬಳಿಬರುವುದನ್ನು ನಿಶ್ಚಲವಾಗಿ ನೋಡುತ್ತಾ ನಿಂತಿದ್ದ ಅವಳು. ತನ್ನ ಕನಸನ್ನು ಹೀರಿ ಇಲ್ಲವಾಗಿಸಿದ ವಿಷ ಕ್ಷಣಕ್ಕಿಂತ ಆ ವಿಚಕ್ಷಣ ಜಂತುವೇ ಲೇಸೆಂಬಂಥಾ ನೋಟ ಅವಳಲ್ಲಿತ್ತು. ಮೆಲ್ಲಗೆ ತುಂಬುತ್ತಿರುವ ಮಂಜೂ ಅವಳಲ್ಲಿ ತಂಪು ತುಂಬಲು ವಿಫಲವಾಯ್ತು, ಹಾಗೇ ಅವನ ಮಾತುಗಳೂ ಸಹ. ರಕ್ತ ಮೆಲ್ಲನೆ ಹೆಪ್ಪುಗಟ್ಟುತ್ತಿತ್ತು. ಅವಳ ಮಾತು ಅಕ್ಷರಗಳಾಗುತ್ತಾ, ಪದ, ಪದಪುಂಜಗಳಾಗುತ್ತಾ, ವಾಕ್ಯಗಳಾಗುತ್ತಾ ಅವಳೊಳಗಿನ ವೇದನೆ ವಿದಿತವಾಗುತ್ತಲಿತ್ತು. ಕೆಲವು ಅರ್ಥವಾಗದಂತಿತ್ತು, ಮತ್ತೂ ಕೆಲವು ಅರ್ಥ ಕಳೆದುಕೊಂಡಂತಿತ್ತು. ಒಂದಕ್ಕೊಂದು ಸಂಬಂಧ ಕಾಣದಂತಹಾ ಅವಳ ತುಮುಲ ಭಾವಗಳು ಅವನನ್ನು ಅವ್ಯಾಹತ ಆತಂಕಕ್ಕೆ ದೂಡಿತು. ಅವನೊಳಗೆ ಅವನನ್ನೇ ಮರೆಸಿತ್ತು.

ಮರೆಸಿತ್ತು ಅಲ್ಲಿನವರ ಮಾತು ಆ ಮೌನವನ್ನು, ಅವಳೊಳಗಿನ ನಗುವನ್ನೂ. ಸಹ್ಯ ಸಮಾಜದೊಳಗೆ ಸವ್ಯ ನಿಯಮಗಳೇ ಸರಿ. ಬದಲಾವಣೆಯ ಗಾಳಿ ಹೆಚ್ಚು ಸಮಯ ನಿಲಲಾರದಲ್ಲಿ. ಅಲ್ಲಿರುವುದು ಎರಡೇ ನಿಯಮ. ಒಂದೋ ಬದಲಾದವರನ್ನು ಬದಲಾಯಿಸುವುದು ಅಥವಾ ಬದಲಾದವರನ್ನು ಬದುಕಲಾರದಂತಾಗಿಸುವುದು. ಅಲ್ಲಿಯೂ ಅದೇ ಆಯ್ತು. ಅವಳು ಅವನಕ್ಕಿಂತ ಕೆಲ ತಿಂಗಳು ದೊಡ್ಡವಳೆಂಬ ಕಾರಣ ಅಲ್ಲಿನವರ ಅಸಮಾಧಾನಕ್ಕೆ ಮೂಲ. ಅಂಥವರ ನಡುವೆ ಅಂತರಪಟ ಸರಿಯುವುದು ಶ್ರೇಯಸ್ಸಲ್ಲ, ಶುಭವಲ್ಲವೆಂಬುದೇ ಅವನು ಅವಳಿಂದ ದೂರಾಗಲು ಹೇತು. ಅವನ ಮನೆಯವರಿಗೆ ಅದೊಂದೇ ವಿಷಯ ಸಾಕಾಗಿತ್ತು ಅವಳನ್ನು ಅವನಿಂದ ದೂರವಿಡಲು. ಅವಳ ಎಷ್ಟೋ ಮರುಪ್ರಯತ್ನಗಳೂ ಮಣ್ಣುಪಾಲಾಯ್ತು. ಆದರೂ ಅವರ ನಿಶ್ಕಲ್ಮಷ ಅನುರಾಗ ಅನಂತವಾಗುತ್ತಲೇ ಇತ್ತು. ಆ ಪ್ರೀತಿ ಅವಳ ಮನದ ಭಿತ್ತಿ ಭಿತ್ತಿಗಳೊಳಗೆ ಅನುರಣನೆಯಾಗುತ್ತಲಿತ್ತು. ಅವರ ಪ್ರೇಮ ಪೂಜನೀಯವಾಗುತ್ತಲಿತ್ತು, ಮನಸು ಪರವಷವಾಗುತ್ತಿತ್ತು. ಅವರಲ್ಲಿ ಭಾವಾತೀತ ಬಂಧಗಳ ಬಂಧನ ಬಿಗಿಯಾಗುತ್ತಿತ್ತು, ಉಸಿರುಗಟ್ಟಿಸುವಷ್ಟು... ಉಸಿರು ನಿಲ್ಲಿಸುವಷ್ಟು... ಉಸಿರ ಮರೆಸುವಷ್ಟು ಎಂಬುದು ಅವಳಿಗೂ ಗೊತ್ತಿತ್ತು; ಅದವನಿಗೂ ತಿಳಿದಿತ್ತು. ವಿಪರ್ಯಾಸ, ಏನೂ ಮಾಡಲಾಗದ ಅಸಹಾಯಕತೆ. ಅವರು ಬಹುವಚನವಾಗದಿದ್ದರೂ ಏಕವಚನವಿಹಿತರಾದರು, ವೇದನಾವಿರಹಿತ ಹಿತಮನಸ್ವಿಗಳಾದರು. ಸಮಾಜದ ಕಣ್ಣೊಳಗೆ ಸಾಮಾನ್ಯರಾದರು, ಮತ್ತೆ ಪಾತ್ರಗಳಾಗಿ ಕೊನೆಯಿರದ ಕಥೆಯಾದರು. ಹಾಗೆ ಅವಳಿಗಾಗಿ ಹಂಬಲಿಸುವ, ಪರಿತಪಿಸುವ ಇನ್ನೊಬ್ಬನಲೂ ಅವಳು ಕನಸಾದಳು. ಅವನ ಬಯಕೆ ಮಾತಾಡಿ ಸೋತಿತ್ತು; ಇವನ ಬಯಕೆ ಮಾತ ಮರೆತು ಸೋತಿತ್ತು..., ಸತ್ತಿತ್ತು. ಸಾವಿಗಿಂತಲೂ ಸುಖದ ನೀರವತೆ ಅಲ್ಲಿತ್ತು. ಅವರ ಕೊನೆಯ ವಿದಾಯದ ಮಾತೂ ಮಾನ ತಾಳಿತುಪರದೆ ಸರಿಸದೆ ಕುಣಿವ ತೊಗಲು ಗೊಂಬೆಗಳಾಗಿದ್ದರು, ವಾಸ್ತವದ ವಸ್ತುಗಳಾಗಿದ್ದರು, ವಚನ ವಿರಹಿತರಾಗಿದ್ದರು... ಅವರಿಬ್ಬರೂ..!

ಅವರಿಬ್ಬರೂ ಇಬ್ಬರಾಗಿಯೇ ಇದ್ದುಬಿಟ್ಟರು. ಕಳೆದ ನಿನ್ನೆಗಳ ನವಿರು ಸಿಂಚನ ಅವಳಲ್ಲಿ ಸ್ವಾತಿಮಳೆಗರೆಯುತ್ತಿತ್ತು. ಬರ-ಬರುತ್ತಾ ಬರ ಬಾರದಿದ್ದರೂ, ಇಬ್ಬನಿ ಕಳೆ ಕಟ್ಟಿರುತ್ತಿತ್ತು.., ಕಣ್ಣೆವೆಯೊಳಗಿನ ತಳಿರುಗಳಲ್ಲಿ, ಹಸಿರು ಕನಸ ಬಳ್ಳಿಗಳಲ್ಲಿ, ಮನದ ಹೂದೋಟಗಳಲ್ಲಿ. ಕಹಿ ದಿವಸ ಮರೆಯಲು ಯತ್ನಿಸಿದ ವ್ಯರ್ಥ ಪ್ರಯತ್ನಗಳೆಲ್ಲ ಕಂಬನಿಯಾಗಿ ಜೊತೆಯಾಗುತ್ತಿತ್ತು. ಕಳೆದ ಕನಸಿಗೆ ನೆರಳಾಗಿ ಒಂದು ಪುಟ್ಟ ಹೃದಯ ಅವಳ ಹೃದಯದಲಿ ಜಾಗ ಪಡೆಯಿತು. ಹೊಸ ನಿರೀಕ್ಷೆಯೊಂದಿಗೆ ಹೊಸತೊಂದು ಜೀವನ ಜಗವನ್ನು ಜಯಿಸಲು ಹೊರಟಿತ್ತು. ಸಹ್ಯ ಸಮಾಜದ ಸನಿಹವಾಗಲು ಸರ್ವ ಸಮ್ಮುಖದಲ್ಲಿ ಸಪ್ತಪದಿ ತುಳಿದು ಅವರು ಸನಿಹವಾದರು. ಪ್ರೀತಿ, ಮೋಹದ ಪರಿಧಿ ವಿಸ್ತಾರಗೊಳ್ಳುತ್ತಾ ಕೊನೆಗೆ ತ್ಯಾಗ, ನಿಸ್ವಾರ್ಥತೆಗಳೂ ಅದರೊಳಗೆ ಸಿಕ್ಕು ಪರಿಭ್ರಮಿತವಾಗಲಾರಂಭಿಸುತ್ತದೆ. ತ್ಯಾಗ, ನಿಸ್ವಾರ್ಥತೆಗಳ ಮುಸಿಕಿನೊಳಗೆ ಏಕಾಂತ ಯಾತನೆಗಳು ತುಂಬಿ ಬದುಕು ಬಂಧುರವೆನಿಸಲಾರಂಭಿಸುತ್ತದೆ, ಭ್ರಮನಿರತವಾಗಿಬಿಡುತ್ತದೆ. ಬದಲಾಗಬಯಸದ ಭಾವನೆ ಮತ್ತೆ ಬದಲಾಗುವತ್ತ ಒಲವು ತೋರುತ್ತದೆ. ಅಂಥಾ ಹಾದಿಯಲ್ಲಿ ಬದುಕು ಮತ್ತೆ ಸೋಲಬಹುದು, ಗೆಲುವ ಕಾಣದಿರಬಹುದು, ಗೆಲ್ಲಲೂಬಹುದು. ಅಂತಹುದೊಂದು ಅತೀತ ಆಸೆಯ ಆಸರೆಯೊಂದಿಗೆ ಅವಳು ನಡೆದಿದ್ದಳು, ನಡೆಯುತ್ತಿದ್ದಳು... ಮರೆವ ನಿನ್ನೆಯ ಹೆಜ್ಜೆಗಳೆಡೆಯಲ್ಲಿ... ಅವರದೇ ನೆ ರ ಳಿ ನ ಲ್ಲಿ.