Jul 29, 2014

ಮೂರ್ತ ಮನಸಿನ ದಿಗಂತದೆಡೆಗೆ

        ಹೊರಗೆ ಹುಚ್ಚು ಹಿಡಿದಂತೆ ಮಳೆ ಸುರಿಯುತ್ತಿದ್ದರೆ, ಮಡಿಲಲ್ಲಿ ಮಲಗಿದ್ದ ಮಗಳು ಕಥೆ ಹೇಳಬೇಕೆಂದು ರಚ್ಚೆ ಹಿಡಿದಿದ್ದಳು. ಕಥೆ ಕೇಳಬೇಕಿತ್ತವಳಿಗೆ ರಾಜ ರಾಣಿಯರಿರದ, ಚಂದ್ರ ಚುಕ್ಕಿ ತಾರೆಗಳಿರದ, ಆಕಾಶದ ಅಪ್ಸರೆಯರಿರದ ಕಥೆ ಬೇಕಿತ್ತವಳಿಗೆ. ನಗು ತರುವ, ಹಸಿವೆ ಮರೆಸುವ, ನಿಜದ ಹೊಸತನದ, ಹಳೆಯ ಉಪಮೆಗಳಿಲ್ಲದ ಕಥೆ ಕೇಳಬೇಕಿತ್ತವಳಿಗೆ. ತಾನು, ತನ್ನಂಥವರಿರುವ ಕಥೆ, ಜಗದ ಜೀವನದ ವ್ಯಥೆ, ಕೇಳಿರರದ ಹೊಸತು ಕಥೆ ಕೇಳಬೇಕಿತ್ತು ಅವಳಿಗೆ. ಶುರು ಮರೆತ ಕಥೆಯಂತೆ, ಪದ ಸಿಗದ ಸಾಲಂತೆ, ಕಥೆಯೊಂದ ಹೆಣೆಯುತ್ತಾ, ಮಗಳ ಹಣೆಮೇಲೊಂದು ಹೂಮುತ್ತನಿಟ್ಟು ಕಥೆ ಆರಂಭಿಸಿದ್ದಳು. ಹಿಡಿದಿಡಲಾಗದ ನೂರೊಂದು ಭಾವಗಳ ಬಂಧನದಲ್ಲಿ ನಲುಗಿ, ಹೊರಳಿ ಕಾಲದ ಹಿಂದೆ ಸರಿದಿದ್ದ ನೆನಪುಗಳು ಕಣ್ಣೆವೆಯಾಚೆಗೆ ಕಣ್ಣೀರಾಗಿ ಹೊರಬರಲು, ಕಥೆಯ ಮೆಲುಕಲ್ಲೇ, ತನ್ನ ಕಥೆಯಲ್ಲೇ ತನ್ನ ಮರೆತಿದ್ದಳು. ಕಳೆದ ಕೊಂಡಿಯ ಕೊನೆಯ ಬೆಸೆವ ಯತ್ನದಿ ಸೋತು ಉತ್ತರವೇ ಉತ್ತರಿಸದ ಪ್ರಶ್ನೆಯಂತಾದವಳು, ಪ್ರಶ್ನೆಗೇ ಅತೀತವಾದ ನಿಜವ ಕಂಡಿದ್ದಳು. ಹೆಸರಿಡದ ಕಥೆಗೊಂದು ಹೊಸಬಣ್ಣ ನೀಡುತ್ತ, ಮಗಳ ಇಷ್ಟಕ್ಕಾಗಿ ನಿಜದ ಕಥೆಯಾದಳು ಅವಳು.

          ಅವಳು ನೆನಪಿನಿಂದಾಚೆಗೆ ಹೋಗುವಷ್ಟೂ ಹೊತ್ತು ತಣ್ಣೀರು ಸುರಿದುಕೊಂಡು ಒದ್ದೆಯಾಗಿಯೇ ಒಳ ಬಂದಿದ್ದ. ಕೂದಲಿನಿಂದ ಜಾರುತ್ತಿದ್ದ ನೀರಹನಿಗಳನ್ನೆಲ್ಲ ತಲೆ ಕೊಡವಿ ಆಚೀಚೆ ಹಾರಿಸಿ, ಕೈಯಿಂದ ಬಾಚಿದಂತೆ ಮಾಡಿ ದೇವರ ಕೋಣೆ ಸೇರಿದ್ದ. ನಕ್ಷತ್ರಗಳು ಒಂದೊಂದಾಗಿ ಮಾಯವಾಗಲಾರಂಭಿಸಿತ್ತು, ದೇವರ ಎದುರು ಹಚ್ಚಿದ್ದ ದೀಪ ಜಾಜ್ವಲ್ಯಮಾನವಾಗಿ ಬೆಳಗಲಾರಂಭಿಸಿತ್ತು. ತನ್ನ ಹಿಂದೆ ಗೋಡೆಯ ಮೇಲೆ ತನಗಿಂತಲೂ ದೊಡ್ಡದಾದ ತನ್ನ ನೆರಳ ಕಂಡು ಆಧ್ಯಾತ್ಮಿಯಂತೆ ತನ್ನೊಳಗೇ ನಕ್ಕಿದ್ದ. ಅಸ್ಖಲಿತ ಶ್ಲೋಕ, ಸ್ತೋತ್ರಗಳಲ್ಲಿ ಲೀನವಾಗಿದ್ದ, ಸುತ್ತಲಿನ ಪರಿವೆ ಮರೆತಿದ್ದ ಆದರೂ ಅವಳ ನೆನಪ ಪರಿಧಿಯೊಳಗಿಂದ ಹೊರಬಾರಲಾರದೆ ದಾರಿತಪ್ಪಿದಂತಾಗಿದ್ದ. ಅವಳ ಪಿಸುಮಾತ ಮಾರ್ದನಿಯೊಳಗೆ ಶ್ಲೋಕಗಳೂ ಲಯತಪ್ಪಿ ತಾದಾತ್ಮ್ಯಮನಸು ತಲೆಕೆಳಗಾಗಿತ್ತು. ಅವಳ ಪಲುಕೇ ಮನದಿ ಮೂರ್ತವಾಗುತಿತ್ತು, ಅವಳೆಡೆಗೆ ಅವನ ಮನ ವಾಲುತ್ತಿತ್ತು ಕ್ಷಣ ಕ್ಷಣ, ಪ್ರತಿ ಕ್ಷಣ.

          ಕ್ಷಣ, ಪ್ರತಿ ಕ್ಷಣ ಅವನ ಬರವಿಗಾಗಿ ಕಾದು ಸ್ನಾನಘಟ್ಟದ ಅಂಚಲ್ಲಿ ಕುಳಿತಿರುವವಳವಳು. ಸಾಯಂಕಾಲದ ಸಂಧ್ಯೆಯ ಮುಗಿಸಿ ಅಲ್ಲಿರುವ ಪುರಾತನ ದೇಗುಲದ ಗರ್ಭಗುಡಿ ಸೇರಿ, ಪೂಜಾ ಕೈಂಕರ್ಯ ಮುಗಿಸಿ, ನಮಿಸಿ ನಡೆಯುವುದು ಅವನ ದಿನಚರಿ. ಅವನು ಕಣ್ಣಳತೆಯಿಂದ ದೂರಾದ ಮೇಲೆ ಅವಳ ಪಯಣ ಅವಳ ಮನೆಯತ್ತ. ಒಂದು ದಿನವಾದರೂ ಅವನ ದರ್ಶನವಾಗದಿದ್ದರೆ ಏನೋ ಸಹಿಸಲಾಗದ ವೇದನೆ, ಏನೋ ಕಳೆದುಕೊಂಡಂತಹಾ ಭಾವನೆ ಅವಳೊಳಗೆ. ಅವಳನ್ನು ನೋಡದೇ ಇರಲಾಗದ, ಅವಳ ನಗುವನ್ನು ಕಾಣದ ದಿನಗಳು ನೋವು, ಏಕತಾನತೆ ತರುತ್ತಿತ್ತು ಅವನೊಳಗೂ. ದಿನಂಪ್ರತಿ ಅವಳು ಕೊಯಿದು ತಂದಿರುವ ಹೂವು ದೇವರಿಗೆ ಏರಿಸದಿದ್ದರೆ, ತರುವ ಹಾಲನ್ನು ನೈವೇದ್ಯ ನೀಡದಿದ್ದರೆ ಪೂಜೆಯಲ್ಲೇನೋ ಕೊರತೆಯಾದಂತಹಾ ಮನಸು ಅವನದ್ದು. ಹೀಗೆ ದಿನವೂ ಅವನ ಸ್ವಾಮಿ-ಕಾರ್ಯ, ಸ್ವ-ಕಾರ್ಯಗಳೆರಡೂ ಜೊತೆಯಾಗಿಯೇ ಸಾಗುತ್ತಿತ್ತು, ಜೊತೆಯಾದ ಹಾದಿಯಲ್ಲಿ ಅವರಿಬ್ಬರ ಮನಸೂ ಕೂಡ, ಅವಳ ಕನಸ ಗೆದ್ದಿದ್ದ ಅವನೂ.

          ಅವನೂ ಅಲ್ಲಿನ ವೈದಿಕ ಕಾರ್ಯಕ್ರಮಕ್ಕಾಗಿ ಬಂದಿದ್ದವನು. ಅವನ ಸಹಚರರ ನಡುವೆ ಎದ್ದು ಕಾಣುವವನವನು. ಸ್ಪುರದ್ರೂಪಿ, ಸೂಕ್ಷ್ಮಮತಿ, ಸ್ಪಷ್ಟ ಉಚ್ಚಾರ, ಸಂಯಮ, ಸದ್ವಿಚಾರಿ. ಅಂದವನ ಕಂಡಾಗಲೇ ಅವನಲ್ಲಿ ಅನುರಕ್ತರಾದವರಲ್ಲಿ ಅವಳೂ ಒಬ್ಬಳು ಮತ್ತು ಅವನ ಅವಳಾದವಳಲ್ಲಿ ಅವಳೇ ಒಬ್ಬಳು. ಇಂಥದೊಂದು ಪರಿಚಯ ಪ್ರಣಯವಾಗಿ ಪ್ರೀತಿಪ್ರಪಂಚಕ್ಕೆ ಸೇರಿತ್ತು. ಇಬ್ಬರಲೂ ಇನ್ನೊಬ್ಬರ ಬಗೆಗೆ ಅಪಾರ ಆಪ್ಯಾಯತೆ, ಅಭಿಮಾನ. ಪ್ರತಿದಿನವೂ ಭೇಟಿ, ಸಾವಿರ ಸಂದೇಶಗಳ ಸಂವಾದ, ಪ್ರೀತಿ ಮಾತಿನ ಸಿಂಚನ ಮರಳಿ ಮನೆಗೆ ಅದೇ ನೆನಪಿನಂದಿಗೆ ನಡಿಗೆ. ಇಂತಹಾ ನಿರಂತರ, ನಿರ್ವಿಕಾರ, ನಿರಾಮಯ ಪ್ರೀತಿಗೊಂದು ಹೊಸ ಹೆಸರು ನೀಡುವ ಪ್ರಯತ್ನ ಇಬ್ಬರ ಮನೆಯಲ್ಲೂ ಆರಂಭವಾಯ್ತ. ಬಣ್ಣ ಬಣ್ಣದ ಕನಸು ಕಾಮನಬಿಲ್ಲಾಗುತ್ತಿತ್ತು ಅವರಿಬ್ಬರೊಳಗೂ. ಜೊತೆ ಅವಳಿದ್ದರೆ ಸಾಕು ಜವನ ಗೆಲ್ಲುವ, ವಿರಿಂಚಿಯ ಬರಹ ಬದಲಾಯಿಸುವ ಅದಮ್ಯ ಸಾಮರ್ಥ್ಯ ಅವನ ತುಂಬಿತ್ತು. ಅವಳ ನಗುವೊಂದಿದ್ದರೆ ಸಾಕು ಜಗದ ಜಂಜಡಗಳೆಲ್ಲಾ ಕರಗಿ, ಚಿಂತೆ ಬಾರದ ಭವಿತವ್ಯದೆಡೆಗೆ ನಡೆವ ಚೈತನ್ಯ ತುಂಬುತ್ತಿತ್ತು. ಅವಳಿದ್ದರೆ ಸಾಕು ಸ್ವರ್ಗವೇ ಕಾಲಡಿ ಎಂಬಂಥಾ ಸುಖದ ಕಲ್ಪನೆ ಅವನಲ್ಲಿತ್ತು. ಅಂಥದ್ದೇ ಹೇಳಲಾಗದ, ತೋರ್ಪಡಿಸಲಾಗದ ಆದರೂ ಮನದೊಳಗೆ ಮುಚ್ಚಿಡಲಾಗದ ಆನಂದದ ಬಯಕೆಗಳು ಅವಳಲ್ಲೂ ಇತ್ತು, ಅವನಲ್ಲೂ ಇತ್ತು.

          ಇತ್ತು ಇಲ್ಲವಾಗಿಸಿದ್ದ, ದೇವರು ಇದ್ದೂ ಇಲ್ಲವೆಂದಂತಾಗಿದ್ದ. ಮಳೆಯ ಇರಿಸಲು ಮಗಳೆಡೆಗೆ ಹಾರದಂತೆ ಸೆರಗ ಅಡ್ಡ ಹಿಡಿದಿದ್ದಳು. ಕಣ್ಣೀರಿನೊಡನೆ ಮಳೆಹನಿಯೂ ಸೇರಿ ಕೆನ್ನೆ ನೆನೆಯ ಹತ್ತಿತ್ತು. ನಿದ್ದೆಯ ಜೊಂಪು ಹತ್ತಿದ್ದ ಮಗಳು ಮತ್ತೆ ಕಣ್ಣ ತೆರೆದು ಮುಂದೇನಾಯಿತೆಂಬಂತೆ ಅವಳೆಡೆ ನೋಡಿ ಕಥೆಯೆಡೆ ಕಿವಿಯಾನಿಸಿ ಕುಳಿತಳು. ಅವಳ ಕಥೆಯನ್ನು ಅವಳು ಮುಂದುವರೆಸಿದ್ದಳು. ಹಂಚಿನಿಂದ ಇಳಿದ ನೀರು ಒಂದಾಗಿ ದಂಬೆ ತುಂಬಿ ಧಾರೆಯಾಗಿ ಅಂಗಳದ ಮೂಲೆಯಲ್ಲಿ ಬಿದ್ದು ನೆಲವನ್ನು ತೋಡಿ ಹರಿದು ಹೋಗುತ್ತಿತ್ತು, ಅವನ ನೆನಪಿನ ಕಣ್ಣೀರು ಅವಳ ಮನದಂಗಳವನ್ನೂ ಹಾಗೆಯೇ ತೋಡಿ ಸೆರಗ ನೆನೆಸುತ್ತಿತ್ತು. ಕಥೆಯಲ್ಲಿ ಕರಗಿದ್ದ ವ್ಯಥೆಯೆಲ್ಲ ವರ್ತಮಾನವ ನೆನಪಿಸಿ ಮಾಯವಾಗಿತ್ತು. ಅಂದವಳ ಅಸ್ತಿತ್ವ, ಇರುವನ್ನು ನೆನಪಿಸಿ ಬದುಕ ಬದಲಾಯಿಸುವಲ್ಲಿ ಒಂದಾಗಿತ್ತು, ಕಂಡೂ ಕಾಣದೆ ದೂರ ನಿಂತಿತ್ತು, ನಡೆವಾಗ ಒಂದಾಗದ ಹೆಜ್ಜೆಯಂತೆ, ದೂರವಿದ್ದೇ ಕಾಯುವ ಕಣ್ಣೆವೆಗಳಂತೆ, ಹಿಂಬಾಲಿಸಿಯೂ ಒಂದಾಗದ ನೆರಳಿನಂತೆ.

          ನೆರಳಿನಂತೆ ಅಂದವನು ಅಲ್ಲಿ ಕಂಡಿದ್ದ, ಅದೆಷ್ಟೋ ವರುಷಗಳ ನಂತರ ಅದೇ ಗುಡಿಯ ಪಕ್ಕದಲ್ಲಿ. ನೆರೆದಿದ್ದ ಜನಸ್ತೋಮದ ನಡುವೆ, ನದಿಯ ಕಲರವದ ನಿನಾದದೊಂದಿಗೆ ಅವನ ಮಾತಲಹರಿ ನೆರೆದವರಿಗೆ ಆಧ್ಯಾತ್ಮಿಕ ಲೋಕವನ್ನೇ ತೋರಿತ್ತು, ಅಲ್ಲಿದ್ದ ಪ್ರತಿ ಹೃದಯಗಳಿಗೆ, ಮೌನ ಮನಸುಗಳಿಗೆ. ನಿರರ್ಗಳ, ನಿರಂತರ, ರೋಮಾಂಚಿತ ಪ್ರವಚನ ನೆರೆದವರೆಲ್ಲರನ್ನೂ ಮಂತ್ರಮುಗ್ಧಗೊಳಿಸಿತ್ತು. ಬದಲಾಗದ ಅದೇ ಮಾತ ಧಾಟಿ, ವಿಚಾರ ಮಂಥನ ಅವಳ ಅಂತರಾಳದಲ್ಲೊಮ್ಮೆ ಛಳುಕು ತಂದಿಟ್ಟಿತ್ತು. ಅಂದು ಅವನು ಅವಳಿಂದ ದೂರಾಗಿ ಇಂದು ನಿರ್ವಿಕಾರ, ನಿಶ್ಚಿಂತನಾಗಿ ಅಲ್ಲಿ ಕುಳಿತಿರುವುದನ್ನು ಕಂಡು ಅವಳ ಕೋಪ ಬೆಂಕಿಯಾಯ್ತು, ನೆರೆದವರೆಲ್ಲರೆದುರು ಅವನ ಬಣ್ಣ ಬಯಲುಮಾಡಿ, ಅವನ ಕಾಷಾಯ ವಸ್ತ್ರದ ಹಿಂದಿನ ವಿಷಯ ರೂಪವನ್ನು ತೋರಿಸುವ ಉತ್ಕಟ ಮನಸ್ಸನ್ನು ಹಟಮಾಡಿ ಹಿಡಿದಿಟ್ಟು, ಸಂದರ್ಭಕ್ಕಾಗಿ ಕಾದು ನಿಂತಳು. ಪ್ರವಚನ ಮುಗಿದು ಪ್ರಸಾದ ವಿತರಣೆಯೊಂದಿಗೆ ಜನಸ್ತೋಮ ಕರಗಲಾರಂಭಿಸಿತ್ತು. ಒಬ್ಬೊಬ್ಬರಾಗಿ ಅವನಿಗೆ ನಮಿಸಿ, ಒತ್ತಾಯದಿಂದ ಕಾಣಿಕೆಗಳನ್ನಿತ್ತು ಧನ್ಯತಾಭಾವದಿಂದ ಹೊರನಡೆಯುತ್ತಿದ್ದರು. ಕೊನೆಗಲ್ಲಿ ಉಳಿದದ್ದು ಅವನು, ಅವನ ಆಪ್ತವೃಂದ ಮತ್ತು ಅವಳು. ಸಾಲಿನಲ್ಲಿ ಕೊನೆಯವಳಾಗಿ ಬಂದು ಅವನೆದುರು ನಿಂತಳು. ಹಸನ್ಮುಖಿಯಾಗಿ, ಕೈಯಲ್ಲಿ ಪ್ರಸಾದ ಹಿಡಿದು ಮುಷ್ಟಿ ಮುಂದೆ ಚಾಚಿ ತಲೆಯೆತ್ತಿದ್ದ. ಅವಳನ್ನು ಕಂಡೊಡನೆ ಅವನ ನಗು ದೂರಾಯ್ತು, ಪ್ರಸಾದ ನೆಲ ಸೇರಿತ್ತು, ಸುತ್ತಲಿನ ಪರಿವೆ ಮರೆತು ಎದ್ದು ನಿಂತವನು ಕಲ್ಲಂತಾಗಿದ್ದ. ನಿಮಿಷಗಳ ನಂತರ ಸಾವರಿಸಿಕೊಂಡು ಹೊರಬಂದು ತಾವು ಕುಳಿತು ದಿನಕಳೆದಿದ್ದ ಸ್ನಾನಘಟ್ಟದ ಮೆಟ್ಟಿಲ ಮೇಲೆ ಅವಳಿಂದ ಅನತಿ ದೂರದಲ್ಲಿ ಕುಸಿದು ಕುಳಿತ. ಭಾವೋದ್ವೇಗ, ಬೇಸರ, ದುಃಖ ಉಮ್ಮಳಿಸಿ ಬಂದಿತ್ತವನಿಗೆ. ಅವಳ ಪ್ರೀತಿಸಿ ದ್ರೋಹಗೈದ ನಿಷ್ಕಾರುಣ, ನಿಷ್ಪಾಪಿ, ಸ್ವಯಂಕೃತ ಅಪರಾಧಿಯಂತೆ ಅವಳ ಪಾದದ ಬಳಿ ಕುಳಿತ. ದೀರ್ಘ ಉಸಿರೆಳೆದುಕೊಂಡು ಅವಳು ಅರಿತಿರದ, ಅವನು ಅವಿತಿರಿಸಿದ್ದ ಕಾರಣವನ್ನು ಹೇಳಲಾರಂಭಿಸಿದ್ದ ಅವಳೆದುರು.

          ಅವಳೆದುರು ದೃಷ್ಟಿ ಸೇರಿಸಿ ಮಾತನಾಡಲಾಗದೆ ದೂರ ದಿಗಂತವನ್ನು ನೋಡುತ್ತಾ ಮಾತ ಮುಂದುವರೆಸಿದ್ದ. ಮಳೆ ತುಂಬಿದ್ದ ಕರಿಮೋಡಗಳು ಬಾನಲ್ಲಿ ಒಂದಾಗಿ ಸಾಗುತ್ತಿದ್ದವು, ಬೆಳ್ಳಕ್ಕಿಗಳ ಸಾಲು ಜೊತೆಯಾಗಿ ಗೂಡು ಸೇರುತ್ತಿದ್ದವು, ನೀರ ಅಲೆಗಳು ಜೊತೆಯಾಗಿಯೇ ಎದ್ದು ಬಿದ್ದು ಹರಿಯುತ್ತಿದ್ದವು ಆದರೆ ಯೋಚನಾ ಲಹರಿ ಅವನ ಬಿಟ್ಟು ದೂರಾದಂತೆ, ಮಾತಿಗೂ ಮನಸಿಗೂ ಜೊತೆಯಿಲ್ಲದಂತೆ, ಮಾತು ಮರೆತು ಮಂಕಾದಂತೆ ನಿಟ್ಟುಸಿರಿಟ್ಟಿದ್ದ. ನಿಶ್ಚಿತಾರ್ಥದ ಮುಂಚಿನ ದಿನ ಅವನ ಮನೆಯಲ್ಲಿ ಅವರಿಬ್ಬರ ಜಾತಕ ತಾಳೆ ಹಾಕಿದ್ದರು. ಅವನ ಕುಂಡಲಿಯಲ್ಲಿ ಕಳತ್ರ ದೋಷವಿರುವುದು ಖಚಿತವಾಯ್ತು. ಕ್ಷಣಕಾಲ ಮೌನ ತುಂಬಿದ್ದ ಮನೆಮಂದಿಯೆಲ್ಲರನ್ನು ಅವನೇ ಸಮಾಧಾನಿಸಿ ತಾನೊಂದು ನಿರ್ಧಾರಕ್ಕೆ ಬರುವುದಾಗಿ ನಗುತಾ ಹೇಳಿದ್ದ. ಅಂದೇ ರಾತ್ರಿ, ಎಲ್ಲರೂ ನಿದ್ರೆಗೆ ಶರಣಾದ ನಂತರ, ಹೇಡಿಯಂತೆ, ಅವಳ ಪ್ರೀತಿಯ ತನ್ನದಾಗಿಸಿ ಪ್ರೀತಿಯ ಬಲಿಕೊಡಲು ಮನಸ್ಸಾಗದೇ ತಾನೇ ತನ್ನ ಪ್ರೀತಿಯನ್ನು ತೊರೆದು ಅವಳು ಸುಖವಾಗಿರಲೆನ್ನುವ ಒಂದೇ ಕಾರಣಕ್ಕಾಗಿ ಮನೆ ತೊರೆದಿದ್ದ, ಸಹಚಹರರ ಸಂಗ ತ್ಯಜಿಸಿದ್ದ, ಅವಳ ಪ್ರೀತಿಯ ಗೆಲ್ಲಿಸಿ ತಾನೇ ಸೋತಿದ್ದ. ತ್ಯಾಗವೇನೋ ಅಮರವಾಯ್ತು ಆದರೆ ಗ್ರಹಗತಿಯ ಬರಹವನ್ನು ಎದುರಿಸಿ ಪ್ರೀತಿಯ ಬದುಕಿಸುವ ಕನಿಷ್ಟ ಪ್ರಯತ್ನ ಮಾಡದೇ, ಭವಿಷ್ಯಕ್ಕೆ ಹೆದರಿ ಓಡಿದವನಾಗಿದ್ದ. ಅಗಾಧ ವೈಚಾರಿಕ ಪಾರಂಗತ, ಜ್ಞಾನಿ, ವಾಸ್ತವ ಮನಸ್ವಿ ಯಃಕಶ್ಚಿತ್ ಒಬ್ಬ ಜ್ಯೋತಿಷಿಯ ಮಾತು ಕೇಳಿ ಗ್ರಹಗತಿಯ ಬದುಕಿಸಿ ತನ್ನ ಪ್ರೀತಿಯ ಕೊಂದಿದ್ದ. ಆತ್ಮಹತ್ಯೆಗೆ ಶರಣಾಗಿ ಫಲಸಿಗದೆ, ಪರಲೋಕವೂ ಪ್ರಾಪ್ತಿಯಾಗದೆ ಇಹದಲ್ಲೇ ಉಳಿದುಬಿಟ್ಟಿದ್ದ. ಪಾಪಪ್ರಜ್ಞೆ ತುಂಬಿ ಪರಿಹಾರಕ್ಕಾಗಿ ಅವನು ಪ್ರವಚನ ಮಾರ್ಗ ಕಂಡುಕೊಂಡಿದ್ದ. ಕುಳಿತಿದ್ದವನಿಗೆ ಬೆನ್ನುಹಾಕಿ ನಿಂತಿದ್ದವಳ ಪಾದದ ಬಳಿ ತಲೆಯಿಟ್ಟು ತನ್ನ ಕ್ಷಮಿಸೆಂದು ಬೇಡಿಕೊಂಡ. ಅವನ ಅಗಾಧ ಪ್ರೀತಿಯ ಮುಂದೆ ಅವಳ ಕ್ಷಮೆ ನಿಲ್ಲದಂತಾಯ್ತು. ಅವನ ಕ್ಷಮಿಸಿದೆನೆಂದು ಮೊದಲ ಬಾರಿಗೆ ಅವನ ಸ್ಪರ್ಶಿಸಿ, ಹಿಡಿದೆತ್ತಿ ನಿಲಿಸಿದ್ದಳು. ದೂರದಲ್ಲಿ ಎಡವಿ ಬಿದ್ದು ಅಳುತಿದ್ದ ಮಗುವನ್ನು ಕಂಡು ಧಾವಿಸಿ ಮಗುವನ್ನೆತ್ತಿ ಅದರ ಅಮ್ಮನ ಕೈಯಲ್ಲಿಟ್ಟು, ಸಾವಿರ ಸಂಗತಿ ಹೇಳಬೇಕೆಂದು ಆತುರದಿಂದ ಅವನೆಡೆ ತಿರುಗಿದ್ದಳು.

          ತಿರುಗಿದ್ದಳವಳು, ಅವನಲ್ಲಿ ತನ್ನ ಮನದ ಆಂತರ್ಯವನ್ನು ಅರುಹಬೇಕೆಂದು, ಕಾಯುವ ಕಹಿ ನೋವ ತಿಳಿಸಬೇಕೆಂದು, ಬತ್ತಿದ್ದ ಕಣ್ಣೀರು ಮರಳಿ ಆನಂದಭಾಷ್ಪವಾದದ್ದನ್ನು, ಪ್ರೀತಿಯ. . . . ಕೊನೆಯಿರದ ಕೋಟಿ ಮಾತುಗಳನ್ನು ಅವನಲಿ ಹೇಳಿ ತನ್ನ ಪವಿತ್ರ ಪ್ರೀತಿಯನ್ನು ನಿವೇದಿಸಲೆಂದು ಅವನಿದ್ದಲ್ಲಿಗೆ ಬಂದಿದ್ದಳು. ಸ್ಥಂಭೀಭೂತಳಾಗಿದ್ದಳು, ಹತ್ತು ಜನ ನೀರಿಗಿಳಿದು ಮುಳುಗಿ ನಿರ್ಜೀವವಾಗಿದ್ದ ದೇಹವನ್ನು ಮೇಲೆತ್ತುತ್ತಿದ್ದಾಗ. ಕಾಷಾಯ ವಸ್ತ್ರ, ಅದೇ ಚಾಂಚಲ್ಯ ಕಣ್ಣು, ಮಾಸಿರದ ಕಿರುನಗೆ, ಕರಗಿದ್ದ ಹಣೆಯ ಮೇಲಿದ್ದ ತಿಲಕ, ಅದವನೇ ಎಂದು ತಿಳಿದಾಗ ಸ್ವಾಧೀನತಪ್ಪಿದಳು. ಅಳುಕಿ, ದುಃಖ ಉಮ್ಮಳಿಸಿ ಹೆಜ್ಜೆ ಹಿಂದಿಡುತ್ತಾ ಗುಡಿಯ ಬಾಗಿಲ ಬಳಿ ಕುಸಿದು ಕುಳಿತಳು. ತನ್ನ ಕ್ಷಮೆಯ ಕರುಣೆಯೂ ಅವನನ್ನು ಬದುಕಿಸಲಾರದಾಯ್ತಲ್ಲವೆಂದು ತನ್ನ ಅದೃಷ್ಟವನ್ನು ಹಳಿಯುತ್ತಾ, ಅವನ ನೆನಪಲ್ಲೇ ಅವಳು ಮನೆಯೆಡೆ ಹೆಜ್ಜೆ ಹಾಕಿದ್ದಳು ಭಾರವಾದ ಹೃದಯದೊಂದಿಗೆ, ಬೇಸರ ಕ್ಷಣಗಳೊಂದಿಗೆ, ಅವನ ನೆನಪಲ್ಲೇ ಬದುಕ ಕಳೆಯುವ ಕುರುಡು ಕನಸಿನೊಂದಿಗೆ. ಅವನ ಅವಳಾಗಿ ನಡೆಯಲಾರಂಭಿಸಿದ್ದಳು, ಹೊಸತೊಂದು ಭವಿತದೆಡೆಗೆ, ಮರೆತ ಭೂತದಾಚೆಗೆ, ವಾಸ್ತವದ ಕ್ಷಣದೊಳಗೆ, ನಿನ್ನೆ ನಾಳೆಗಳ, ಅಮರ ತ್ಯಾಗದ, ಮೂರ್ತ ಮನಸಿನ ದಿಗಂತದೆಡೆಗೆ. ನೆನಪಾದ ಅವನ ಅಂತರಂಗದೆಡೆಗೆ ಅವಳ ನಡಿಗೆ.

           ನಡಿಗೆ ಮರೆತು ನಿಂತವಳಂತೆ, ಹಾದಿ ತಪ್ಪಿ ಹುಡುಕುವವಳಂತೆ ಅಲ್ಲಿ ನಿಂತಿದ್ದಳು. ಮಡಿಲಲ್ಲೇ ಮಲಗಿದ್ದ ಮಗಳನ್ನು ಮಲಗಿಸಿ, ಕಿಟಕಿಯಿಂದ ಇಣುಕುತ್ತಿದ್ದ ಅರ್ಧಚಂದ್ರನಲ್ಲಿ ಅವನನ್ನು ಹುಡುಕುವ ಪ್ರಯತ್ನ ಮಾಡುತ್ತಿದ್ದಳು. ಪ್ರತಿ ದಿನವೂ ಹೊಸತೊಂದು ನಾಳೆಯ ತರುತಿರಲು, ನಾಳೆಗಾಗಿ ಇಂದಿನ ದಿನವ ಬಯಸುತ್ತಿದ್ದಳು, ಬಯಸಿ ಬದುಕುತ್ತಿದ್ದಳು, ಅವನ ಪ್ರೀತಿಯೊಡನೆ, ಅವನ ಕಥೆಯೊಡನೆ, ಅವನ ನೆನಪ ದತ್ತು ಮಗಳೊಡನೆ, ನೆನಪು ತರಿಸುವ, ನೆನಪ ದೂರ ದೂಡುವ ಸಾವಿರ ಸುಮಧುರ ಸಾಲುಗಳೊಡನೆ. ಮುಲುಗಿ, ಮಗ್ಗಲು ಬದಲಿಸಿ ಮತ್ತೆ ಕಥೆ ಕೇಳಬೇಕೆಂದು ಕನವರಿಸಿ ಮಗಳು ಮಲಗಿರಲು, ಮತ್ತದೇ ಹಾಡು ದನಿಮಾಡುತಿತ್ತು, ಅವನ ಇಷ್ಟದ ಘಜಲ್ ಸಾಲು;
' ಮಾ ಸುನಾವೋ ಮುಝೇ ವೋ ಕಹಾನೀ,
ಜಿಸ್ ಮೆ ರಾಜಾ ನ ಹೋ ನಾ ಹೋ ರಾನಿ…'