Jul 8, 2010

ಅವನ ಕನಸಿನ ಕನಸು; ಅವಳ ಕನಸು

ಮೊದಲ ಮಳೆಗಾಲದ ಒಂದು ಮುಸ್ಸಂಜೆ. ಗಾಳಿಯೊಂದಿಗೆ ಮೆಲ್ಲನೆ ಮೇಲೆದ್ದು ಮುಸುಕುತ್ತಿರುವ ಮಂಜು. ಮಂಜಿನ ಮುತ್ತಿನಂತಹಾ ಸಣ್ಣ ಬಿಂದುಗಳು ಅವಳ ಮುಂಗುರುಳನ್ನು ಅಪ್ಪಿಕೊಂಡಿತ್ತು. ಮುಂಜಾವ ಇಬ್ಬನಿಯಂತೆ ಅವಳ ಮೌನ ಅಧರಗಳನ್ನಲಂಕರಿತ್ತು. ರೆಪ್ಪೆ, ಹುಬ್ಬುಗಳನ್ನು ಮುತ್ತಿಟ್ಟಿತ್ತು, ಅವನ ಚಿಗುರು ಮೀಸೆಯನ್ನೂ. ಅರ್ಥವಾಗದ ನೂರು ಚಿತ್ರ ಗೀಚಿದ ಮುಂಗಾರ ಕರಿ ಮುಗಿಲು, ಬೆಲ್ಲ ತಾಗಿದ ಅವಳ ಗಲ್ಲ ಚುಂಬಿಸಿ ಸುಳಿವ ಕಳ್ಳ ಸುಳಿಗಾಳಿ, ಮಳೆಯ ಬರವನು ಬಯಸಿ ಕೂಗಿ ಕರೆಯುವ, ಕಾಯ್ವ ಮಳೆಹುಳದ ತನನ. ಮನದ ಪುಟ-ಪುಟಗಳಲಿ ಪ್ರಕೃತಿಯಾಗಿತ್ತೊಂದು ಪ್ರೇಮಗಾನ. ಆ ತಣ್ಣನೆಯಲ್ಲಿ ಅವನ ಬೆಚ್ಚನೆಯ ಕೈಯೊಳಗೆ ಕೈಯಿರಿಸಿ ಕುಳಿತಿದ್ದ ಅವಳಲ್ಲಿ ಅವಿಸ್ಮರಣ ಅನುಭಾವ. ಜೋಗದ ಮಡಿಲಲ್ಲಂದು ಹೃದಯಸ್ಪರ್ಶಿ ಅನುಭವ. ಏಕಾಂಗಿಯಾಗಿ, ಸೊರಗಿ ಸುರಿಯುತ್ತಿದ್ದ ಜಲಧಾರೆಯಲ್ಲೂ ಪ್ರೀತಿಯ ಸಲಿಲ ತುಂಬಿತ್ತು. ನಿನ್ನೆಗಳನ್ನು ಮರೆತ ನಿಶ್ಚಿಂತ ನಗುವಿತ್ತು, ಅವಳಲ್ಲಿ ಸಂತೃಪ್ತಿಯಿತ್ತು, ಅವನನ್ನು ಜೊತೆಪಡೆದ ಸಂಭ್ರಮವಿತ್ತು.

ಸಂಭ್ರಮವಿತ್ತು, ತುಂಬಿದ ಸಂತೋಷವಿತ್ತು. ಹರಕೆ-ಹಾರೈಕೆಗಳು ವಧೂ-ವರರ ಹಾರೈಸುತಿತ್ತು. ಹೋಮ-ಹವನದ ಹೊಗೆಯೂ ಅಲ್ಲೆಲ್ಲಾ ತುಂಬಿತ್ತು. ಹಲವರಿಗೆ ಹಸಿವ ಹೊಗೆ ಊಟ ನೆನಪಿಸಿತ್ತು. ಮದುವೆ ಮಂಗಳವಾಗಿ ಮುಗಿದಿತ್ತು. ಹೊಗೆ ಕರಗಿದಂತೆ ಅಲ್ಲಿ ಜನವೂ ಕರಗಿತ್ತು. ಬಂಧುಗಳ, ಸ್ನೇಹಿತರ, ಮನೆಯ ಬಳಗ, ಕಳೆದ ಮದುವೆಯ ಕ್ಷಣ ಮಾತ್ರ ಅಲ್ಲಿ ಉಳಿದಿತ್ತು. ಮದುಮಗಳು ತವರು ಮನೆಯ ತೊರೆಯಬೇಕಿತ್ತು. ಎಲ್ಲರ ಕಣ್ಣೂ ತುಂಬಿತು. ಬೇಸರಿಸಿ ಮೋಡವೂ ಕಂಬನಿಯಿರಿಸಿತು. ವರನ ಮನಸೆಡೆ ಎಂದೋ ನಡೆದಾಗಿತ್ತು, ವರನ ಮನೆಯೆಡೆ ಈಗ ನಡೆಯಬೇಕಿತ್ತು. ಮಳೆ ನಿಂತು ನಿಮಿಷದಲ್ಲಿ ಅವರ ವಾಹನ ಹೊರಟಿತು. ಮನೆಯಿಂದ ದೂರ, ಮನಸಿಂದಲೂ. ಹಳೆ ನೆನಪ ಅಲ್ಲುಳಿಸಿ, ಕೆಸರಿನಲಿ ಹೆಜ್ಜೆ ಗುರುತುಳಿಸಿ, ಅಳುವಿನಲೇ ವಿದಾಯ ತಿಳಿಸಿ ದೂರವಾಗಿದ್ದಳು. ವರನ ಕೈ ಹಿಡಿದವಳು, ಹೊರಳಿ ನಮ್ಮೆಡೆ ಕೈ ಬೀಸಿದ್ದಳು, ನವ-ವಧು ನಮ್ಮೆಲರನ್ನೂ ಬಿಟ್ಟು ಹೋಗಿದ್ದಳು.

ಬಿಟ್ಟು ಹೋಗಿದ್ದಳು... ಅವನನ್ನು ಎಂದೆಂದಿಗೂ ಬಿಟ್ಟು ದೂರ ಹೋಗಿದ್ದಳು. ದಿನ ರಾತ್ರಿ ಬಾನಲ್ಲಿ ಮಿನುಗುವ ತಾರೆಯಾಗಿದ್ದಳು, ಮನದ ಗುಡಿಯೊಳಗವಳು ನೆನಪ ಹಣತೆಯಾಗಿದ್ದಳು. ಅವನ ಕಣ್ಮುಂದೊಮ್ಮೆ, ಅವನ ಮದುವೆಯ ದಿನಗಳು ಬಂದು ಹೋಯ್ತು. ಕಳೆದ ಕ್ಷಣಗಳು ತಿರುಗಿ ಬಳಿಬಾರದಂತೆ ಪ್ರಯತ್ನಿಸಿದ್ದೆಲ್ಲಾ ವ್ಯರ್ಥವಾಯ್ತು. ಅರಿವಿರದೆ ಎರಡು ಹನಿ ಕಣ್ಣ ದಾಟಿ ನೆಲಸೇರಿತು.

ನೆಲಸೇರಿತು ಅವನ ಕನಸ ಗೋಪುರವೆಲ್ಲ ಅಂದು ಅವಳು ಕನಸಾದಂದು. ಹೊಸ ಜೀವವೊಂದು ಜಗದಿ ಕಣ್ಣು ತೆರೆಯುವ ಮೊದಲೇ, ಮುಗ್ಧ ಜೀವಗಳೆರಡೂ ಕಣ್ಣ ಮುಚ್ಚಿತ್ತು. ದಾರಿ ತೋರುವ ಬೆಳಕೇ ಅವನ ಕಣ್ಣ ಚುಚ್ಚಿತ್ತು. ನಾಳೆ ಹೀಗಿರಬಹುದೆಂದಿದ್ದ ಆಸೆಯೇ ಕಮರಿಹೋಗಿತ್ತು. ಆದರೂ ನೋವು ನುಂಗುತ, ನಗುತ ಎಲ್ಲರೊಳು ಬೆರೆತಿದ್ದ. ಹೊಸತು ನಾಳೆಯ ನಂಬಿ ದಿನ ದೂಡುತಿದ್ದ. ಕನಸ ತರುವ ಸುಖ ನಿದ್ದೆಯ ಮರೆತಿದ್ದ, ತನ್ನವಳ ನೆನಪ ಸುಳಿಯೊಳಗೆ ಸಿಲುಕಿ ಕಳೆದುಹೋಗಿದ್ದ.

ಕಳೆದುಹೋಗಿದ್ದ ಕಾಲ ಮತ್ತೆ ಸಿಕ್ಕಿದಂತನಿಸಿತು ಅಲ್ಲಿ ಅವಳನ್ನು ಕಂಡು. ಕಳೆದ ನಿಮಿಷಗಳೆಲ್ಲ ಮತ್ತೆ ಅವನೊಡನೆ ನಡೆಯುತ್ತಿರುವಂತೆ ಭಾಸವಾಯ್ತು. ಭಾವನೆಯ ಸುಳಿಯೊಳಗೆ ಸಿಕ್ಕು ಭೂಮಿ ಬಾಯ್ದೆರೆದಂತೆ ಅವನ ಪುಟ್ಟ ಹೃದಯಕ್ಕನಿಸಿತು. ನಡೆಯುತ್ತಿರುವ ನಿಮಿಷಗಳು ನಿಂತು ಮತ್ತೆ ಓಡಿ ಎದೆಬಡಿತವನ್ನು ಹಿಂದಿಕ್ಕಿದಂತೆ, ಮೆಟ್ಟಿ ಮರೆತಿದ್ದ ಹೆಜ್ಜೆಗಳೇ ಮರಳಿ ಹೆಜ್ಜೆಗಳಾದಂತೆ, ತನ್ನವಳೇ ತನ್ನೆದುರು ನಿಂತು ನಕ್ಕಂತೆ ಅನಿಸಿತು. ಮದುವೆಯ ಹಿಂದಿನ ದಿನವೇ ಅವಳನ್ನು ಕಂಡಿದ್ದರೂ ಅವನಲ್ಲಿ ಇಂತಹದೊಂದು ತುಮುಲ, ತುಡಿತ, ತಳಮಳದ ಅಲೆ ಎದ್ದಿರಲಿಲ್ಲ. ಗೆಳತಿಯ ಸನಿಹ ತೊರೆದ ವೇದನೆ ಅವಳ ಕಣ್ಣಲ್ಲೂ ಇಣುಕಿತ್ತು. ಕಳೆದ ದಿನಗಳ ಮೆಲುಕು ಅವಳೊಳಗೂ ನಡೆದಿತ್ತು. ನೋಡುವವರಿಗೆ, ಜೊತೆಕುಳಿತು ಪರಸ್ಪರ ವೇದನೆಯ ಒಸಗೆ ಪಡೆದವರಂತೆ ಕಾಣುತ್ತಿದ್ದರು ಅವರಿಬ್ಬರೂ.

ಅವರಿಬ್ಬರೂ ಹಿಂದಿನ ದಿನದಿಂದಲೇ ಪರಿಚಿತರು. ವಧುವಿನ ಗೆಳತಿ ಅವಳು, ಓರಗೆಯವನವನು. ಅವತ್ತಿನಿಂದಲೂ ಜೊತೆಯಲ್ಲಿ ಮಾತಾಡಿದ್ದರು, ಓಡಾಡಿದ್ದರು, ತಮಾಷೆ ಮಾಡಿದ್ದರು, ನಕ್ಕಿದ್ದರು, ನಗಿಸಿದ್ದರು. ಪ್ರತಿ ಕ್ಷಣದ ಸಂತೋಷ ಸೂರೆಮಾಡಿದ್ದರು. ಗುಬ್ಬಿ ಕೂಗಿನ ಗಡಿಯಾರ ಅವರನ್ನು ಎಚ್ಚರಿಸಿತು, ಮತ್ತೆ ವಾಸ್ತವಕ್ಕೆ ಮರಳಿದ್ದರು.

ಮರಳಿದ್ದರು ಅವರವರ ಊರಿಗೆ, ಅವರವರ ಕೆಲಸಗಳಿಗೆ. ಮನಸಿಲ್ಲದ ಮನಸಿನಿಂದ ಮಾಮೂಲಿ ದಿನಗಳಿಗೆ, ಅರ್ಧಕ್ಕೇ ಬಿಟ್ಟಿದ್ದ ಪ್ರಶ್ನೆಗಳಿಗೆ, ಹರಿದ - ಗೀಚಿದ ಪುಟಗಳಿಗೆ, ಮುಗಿಸಿರದ ಉತ್ತರಗಳಿಗೆ, ನಿದ್ರೆಗೆ ದೂಡುವ ನಿತ್ಯದ ಕುರ್ಚಿಗಳಿಗೆ. ಆದರೆ, ಅವಳ ಕೆಲಸಗಳಲ್ಲಿ ಹೊಸತನವಿತ್ತು. ಹರಿದ ಪುಟಗಳಲೂ ಅವನ ನೆನಪ ಗೀಚಿತ್ತು. ನಿದ್ರೆ ತರಿಸುವ ಕುರ್ಚಿ ಹೊಸಕನಸ ತೋರಿತ್ತು. ಹೇಳಲಾಗದ ಮಾತು ಹೃದಯ ತುಂಬಿತ್ತು.

ಹೃದಯ ತುಂಬಿ ಬಂದಿತ್ತು ಅವಳಿಗೆ ಜೋಗದ ಒಡಲಿನಲ್ಲಿ, ತಲೆಯಿರಿಸಿ ಮಲಗಿದ್ದಳು ಅವನ ಮಡಿಲಿನಲ್ಲಿ. ಸಿಹಿಯಾದ ಕಣ್ಣೀರು ಅವಳ ಗಲ್ಲ ದಾಟಿತ್ತು. ಅವನ ಪ್ರೀತಿಯ ಪಡೆದ ಆ ದಿನವ ನೆನೆದು, ಕಣ್ಣಲ್ಲಿ ಕಣ್ಣಿಟ್ಟು ಸಮ್ಮತಿಸಿದ ಆ ಸಂಜೆಯ ನೆನೆದು.

ನೆನೆದು ನೀರು ತೊಟ್ಟಿಕ್ಕುತ್ತಿತ್ತು ಮಳೆಯಿಂದ ತಡವಾಗಿ ಮನೆ ಸೇರಿದಂದು. ತಲೆಯೊರಸಿ, ಬಿಸಿ ಕಾಫಿ ಹೀರುವ ಮೊದಲೇ ಅಮ್ಮನ ಕಣ್ಣಲ್ಲಿ ದೃಷ್ಟಿ ನೆಟ್ಟಿದ್ದಳು. ಅವನನ್ನು ಕಂಡ ಮೊದಲ ದಿನದಿಂದ ಹಿಡಿದು ಅಂದಿನವರೆಗಿನ ಅವಳ ಮನದ ಮುನ್ನೂರು ಮಾತುಗಳನ್ನು ಅವರ ಮುಂದಿಟ್ಟಿದ್ದಳು, ಮನದ ಮೌನ ಮುರಿದಿದ್ದಳು. ಸಮಾಧಾನದ ನಗೆ ನಕ್ಕು ಬರಿದಾದ ಲೋಟ ಅಮ್ಮನ ಕೈಯೊಳಗಿರಿಸಿದ್ದಳು. ಒಂದು ನಿಮಿಷ ಅಲ್ಲೆಲ್ಲರೂ ಸ್ಥಬ್ಧ. ಸಾವರಿಸಿ, ಅವರವರ ಒಪ್ಪಿಗೆ ಸೂಚಿಸಿದ್ದರೂ, ’ವಿಧುರನೊಂದಿಗೆ ವಿವಾಹ’ ಎಂಬುದಕ್ಕೆ ಮಾತ್ರ ವಿರೋಧವೆದ್ದಿತು. ಅಂದು ಅವಳ ಪಾಲಿನ ಅನ್ನ ಅಲ್ಲೇ ಉಳಿದಿತ್ತು. ನಿದ್ದೆಯಿಲ್ಲದೆ ರಾತ್ರಿ ಯೋಚನೆಯಲ್ಲೇ ಕಳೆದಿದ್ದಳು. ಮನೆಯವರು ಒಪ್ಪಿದರೂ ಸುತ್ತಲಿನ ಸಮಾಜ ಸುಮ್ಮನಿರುವುದೇ..? ಎಂಬುದೇ ಎಲ್ಲರ ಚಿಂತೆ. ದಿನಾ ರಾತ್ರಿ ಉಪವಾಸ, ಅವನ ನೆನಪ ಉಪಾಸನೆಯಲ್ಲೇ ವಾರ ಮೀರಿತು. ಕೊನೆಗೂ ಮನೆಯವರ ಒಪ್ಪಿಗೆ ಸಿಕ್ಕಿತು. ಅವಳ ಒಪ್ಪೊತ್ತು ಮುಗಿದಿತ್ತು.

ಮುಗಿದಿತ್ತು ಅವಳ ಸಂಪು, ಆದರೂ ಕೇಳ ಸಿಗಲಿಲ್ಲ ಅವನ ಒಪ್ಪಿಗೆಯ ಮಾತ ಇಂಪು. ಹುಚ್ಚು ಸಮಾಜದ ಜೊತೆಗೆ ಸೆಣಸಲು ಅವನು ಸಿದ್ಧನಿರಲಿಲ್ಲ. ಅವನನ್ನು ಪ್ರೀತಿಸಿದ ಮನಸನ್ನು ನೋಯಿಸಲೂ ಮನಸಿರಲಿಲ್ಲ. ತನ್ನವಳ ಹೃದಯವನ್ನು ಅವಳಿಗೆ ನೀಡಲೂ ತಯಾರಿರಲಿಲ್ಲ. ಅವಳೆಡೆಗೆ ಅಂದು ಅಂತಹಾ ಭಾವನೆಯಾದರೂ ಯಾಕೆ ಬಂತೋ ಎಂದು ಅವನನ್ನೇ ಹಳಿಯಲಾರಂಭಿಸಿದ. ಭಸ್ಮ ಧರಿಸಿಯೂ ಬದಲಾಗದ ಹಣೆಬರಹವನ್ನು ಬದಲಾಯಿಸಲು ಬಯಸಿ ಸೋತುಹೋಗಿದ್ದ. ಅವಳ ಮನಸಿಗೆ ಕೊನೆಗೂ ಸೋತುಬಿಟ್ಟಿದ್ದ. ತನ್ನೊಳಗೆ ತನ್ನವಳ ಸೋತು ಗೆದ್ದಿದ್ದ, ಗೆದ್ದು ಸೋತಿದ್ದ.

ಸೋತಿದ್ದ ಮನಸೆರಡೂ ಒಂದಾಗಿತ್ತು ಜೋಗದ ಅಂಗಳದಲ್ಲಿ, ಮಳೆ ಹನಿಗಳ ಇರಸಲಿನಲ್ಲಿ, ಭಾವನೆಗಳ ಬಂಧನದಲ್ಲಿ, ಕೊನೆಯಿಲ್ಲದ ಕನಸುಗಳಲ್ಲಿ. ಜಗದ ಕಣ್ಣೊಳಗಿನ ಹುಚ್ಚು ಬಯಕೆ ಅವಳ ಕನಸಾಗಿತ್ತು. ತನ್ನವಳಿಗೆ ಮುಡಿಪಾದ ಅವನ ಮನಸು ಅವಳ ಇಷ್ಟವಾಗಿತ್ತು. ಅನಾಥೆಯೆನಿಸದ ಅನಾಥ ಬದುಕು ಅವಳದಾಗಿತ್ತು. ಅವಳ ಕನಸು ನನಸಾಯಿತು, ಇಷ್ಟ ನಿಜವಾಯಿತು, ಅನಾಥೆ ತಾನೆಂಬ ಆಂತರ್ಯ ದೂರಾಯಿತು... ಮರಳಿ ಮಳೆ ಶುರುವಾಯಿತು, ಹೊಸತು ಕನಸೊಂದು ಚಿಗುರೊಡೆಯಿತು.