Jan 1, 2013

ಅವನು; ಕಥೆಯಾಚಿನ ಕಿರು ಪಾತ್ರಕೆ ಜೀವವಾದವನು

ರಾತ್ರಿ ಹನ್ನೆರಡೂ ಹಗಲು ಅವನಿಗೆ. ಗಡಿಯಾರದ ಮುಳ್ಳಿನ ನಡೆ ಮೀರಿಸುವಂತೆ ಅವನ ಯೋಚನೆಗಳು ಓಡುತ್ತಿತ್ತು. ಚಳಿ, ಕಚಗುಳಿಯಿಡುವ ಹುಚ್ಚು ತಂಗಾಳಿ, ದೂರದಲ್ಲೆಲ್ಲೋ ಹೊಳೆದು ಕಾಣದಾಗಿ ಹೋಗುವ ಮಿಂಚ ದಾಳಿ. ನಿರತ ನಿನಾದ ತುಂಬುವ ಹೊರಗೆ ನೀರ ಹನಿಗಳ ತನನ, ಕನಸ ಕಾಣದ ನಯನ ಬಯಕೆಯೊಂದಿಗೆ ಮಿಲನ, ಅವನೊಳಗೆ ಮರೆಯಲಾರದ ನೆನಪ ಮರಣ, ಮರು ಜನನ.

ಮರು ಜನನ ಇರಬಹುದೇನೋ ಎಂದೆನಿಸುವ ಮಧುರ ಭಾವನೆ ಅಂದವಳು ಎದುರು ಬಂದಂತಾಗಿ ದೂರ ನಿಂತಾಗ. ನೂರು ಜನುಮದ ನೆನಪು ಹಸಿರಾಗಿ ಜೊತೆಯಾದಂತಹಾ ಅನುಭವ, ಸುತ್ತಲಿನ ಪರಿವೆ ಮರೆತು ಅವರಿಬ್ಬರೇ ಜೊತೆನಿಂತ ಅನುಭಾವ. ನಂಬಲಾಗದ ನೂರು ಮೌನ ಮಾತುಗಳಲ್ಲೂ ನಿಜದ ನಂಬುಗೆ ನಿತ್ಯ ನಿಜವಾಗುತಿತ್ತು. ಹೆಸರಿಡದ ಹೊಸತೊಂದು ಬಂಧನದ ಬೇಗುದಿಯು ಅವನೊಳಗೆ ಅವಳನ್ನು ಬರಸೆಳೆಯುತಿತ್ತು, ಬಾಂಧವ್ಯ ಬಿಗಿಯಾಗುತಿತ್ತು. ಮರೆತ ಮಾತುಗಳೆಲ್ಲ ನೆನಪಾಗಿ ಮರೆತಾಯ್ತು, ಕಣ್ಮಿಂಚ ಮಿಂಚೊಂದು ಕಂಡು ಮರೆಯಾಯ್ತು, ಕಣ್ಣ ಬೆಳಕಾಯ್ತು, ಅವಳ ಕಿರುನಗುವೊಂದೇ ಅವನ ಬಲವಾಯ್ತು.

ಬಲವಾಯ್ತು ಅವನ ನಂಬುಗೆ, ನಿಜವಾಯ್ತು ಅವಳು ಅವಳೇ ಎಂದು. ಕಣ್ಣರಿಯಲಾರದ ಕ್ಷಣದ ಛಾಯೆಯ ಕರುಳರಿಯಿತು, ಅಂತಃಕರಣ ಅರಿತು ಮತಿ ಮರೆಯಿತು. ಅಬ್ಬರದ ಅಲೆಯುಕ್ಕಿ ತೀರದಲಿ ಕಟ್ಟಿದ್ದ ಉಸುಕಿನ ಮಾಳಿಗೆಮನೆ ಮರಳಿ ಮರಳಾದಂತೆ, ಕಾಣದ ನೂರು ಕೈಗಳು ನೂರೆಡೆಗೆ ಕಾಲೆಳೆಯುವಂತೆ, ನಿಂತ ನೆಲ ಸೆರೆ ಬಿಟ್ಟು ಇಬ್ಭಾಗವಾದಂತೆ ಅನಿಸಲಾರಂಭಿಸಿತ್ತು. ನಿಲಲಾಗದೆ, ವೇದನೆಯ ಭಾರ ತಡೆಯಲಾರದೆ ಕಾಲ್ಗಳು ಕೈಕೊಡಲಾರಂಭಿಸಿತ್ತು. ಇಂತಹಾ ಚಡಪಡಿಕೆಗಳೆಲ್ಲವನ್ನು ಹತ್ತಿಕ್ಕುವ ಹುಚ್ಚು ಪ್ರಯತ್ನ ಅವನಲ್ಲಿ ಬಲವಾಗಲಾರಂಭಿಸಿತ್ತು. ಅವಳ ದೃಷ್ಟಿ ಮತ್ತೆ ಅವನಲಿ ನೆಟ್ಟು, ಅವಳು ಗುರುತು ಹಿಡಿಯುವುದರೊಳಗೆ ಅವನು ಬದಿಗೆ ಸರಿಯಬೇಕೆಂದು ಮಾಡಿದ ಪ್ರಯತ್ನವೂ ನಿಷ್ಫಲವಾಗಿತ್ತು. ಅವಳಲ್ಲೊಮ್ಮೆ ಅಂತಹುದೇ ಅಮಿತ ಸಂಚಲನ ಶೃಂಖಲೆಯಾಗಿ ಬಿಗಿಯಾಗಿ ಬಂಧಿಸಿ ಅವರಿಬ್ಬರ ಸ್ವಂತ ಸ್ವತಂತ್ರ ದಿನವನ್ನು ಮುಂದೆ ತಂದಿಟ್ಟಿತು. ನೆನಪಿನ ಮಂಜು ಸುತ್ತ ತುಂಬಲಾರಂಭಿಸಿತು. ಅವನನ್ನು ಕಂಡ ಕ್ಷಣ, ಅವಳೊಳಗೆ ಕ್ಷಣ ಕ್ಷಣ.

ಕ್ಷಣ ಕ್ಷಣವೂ ಅವನನ್ನು ಕಾಯುವುದು ಅವಳಿಗೆ ಸಹಿಸಲಾರದ ಭಾರವಗುತಿತ್ತು. ಅವನನ್ನು ನೂರು ಸಲ ಕಾಯಿಸಿದ್ದ, ಕಾಯಿಸಿ ಸತಾಯಿಸಿದ್ದವಳಿಗೆ ಕಾಯುವ ಸಹನೆ, ಕಾತರಗಳೆಲ್ಲ ಒಂದಾಗಿ ಅವನೆಡೆಗಿನ ತಹ ತಹಿತ ಹೆಚ್ಚು ಮಾಡಿದ್ದವು. ನಗು ಮೊಗದಿ ಎದುರು ಬರುತಿದ್ದವನ ನಿಶ್ಚಲ ನಯನಗಳನ್ನು ಕಾಣುತ್ತಿದ್ದಂತೆಯೇ ಓಡಿ ಅವನನ್ನು ಬರಸೆಳೆದು ಬಾಹುಗಳಲ್ಲಿ ಬಂಧಿಸಿ, ಕಾಯುವ ಕಷ್ಟವೆಲ್ಲವನ್ನೂ ಮರೆಯುವಷ್ಟು ಅಪ್ಪಿಕೊಳ್ಳಬೇಕೆಂದೆನಿಸಿತ್ತು. ಬಹಳ ಕಷ್ಟದಿಂದ ಮನದ ಆಸೆಯನ್ನು ಹತ್ತಿಕ್ಕಿ ಅವನ ಕೈ ಹಿಡಿದು ಅವರ ಕಾಯುತ್ತಿದ್ದ ಕಲ್ಲು ಬೆಂಚಿನ ಕಡೆ ಜೊತೆ ನಡೆದಿದ್ದಳು ಅವನೊಂದಿಗೆ. ಜೀವನದ ನಾನೂರು ಯೋಚನೆಗಳನ್ನೂ ಅವನೊಂದಿಗೆ ಹಂಚಿ, ಮನದೊಳಗಿನ ಭಾವನೆಗಳನ್ನೆಲ್ಲ ಬರಿದು ಮಾಡಿದ್ದಳು. ಬಯಸಲಾರದ ಬರಿಯ ಭಾವನೆಯ ಬಯಕೆಯಲಿ ಬೆಂದು ಬಾಡಿದ ಬದುಕ ಬಿದಿಗೆ ಬಾನಿನ ಬಂಧು ಬದಲಾಯಿಸಿದ್ದ. ಕಾರಣವೇ ಕಾಣಿಸದೆ ಕಾಣಲಾರದ ಕನಸ ಕಣ ಕಣದಿ ಕನವರಿಸಿ ಕಣ್ಣ ತೆರೆಸಿದ್ದ. ಚಂದಿರನ ಅಂಗಳದಿ ಹುಣ್ಣಿಮೆಯ ತಂಪೆರೆದು ಕೈಹಿಡಿದು ಹೊಸದಾರಿ ನಡೆಸುವವಳು, ಮನದ ಕಣ್ಗಳಿಗೊಂದು ಹೊಸ ದೃಷ್ಟಿ ಹೊಂದಿಸುತ ಜೀವನವ ಜೊತೆಯಾಗಿ ಜಯಿಸುವವಳು ಎಂದು ಅವನಿಗೆ ಮನದಟ್ಟಾಯ್ತು ಅವಳ ಭಾಷೆಯಿಂದ, ಮನ ಮನದ ಬೆಸುಗೆಯಿಂದ, ಪ್ರೇಮ ಬಾಂಧವ್ಯದಿಂದ, ಅಂದವಳ ಮಾತಿನಿಂದ.

ಮಾತಿನಿಂದ ಹೇಳಲಾಗದ ಅನಂತ ಆನಂದ ಅವನೊಳಂದು ಮನೆಮಾಡಿತ್ತು. ಖುಷಿ ತುಂಬಿ ಎದೆಯೊಳಗೆ ಏನೋ ಹೇಳಲಾರದ ಸಿಹಿ ಅನುಭವ ತುಂಬಿತ್ತು. ಕುರುಡು ಬಾಳೊಳಗೊಂದು ಕಂದೀಲು ಹಿಡಿದು ಅವನ ಹೃದಯದ ಹೊಸ್ತಿಲಲ್ಲಿ ನಗುತ ನಿಂತಿದ್ದಳು. ಅವನ ನಿಶ್ಚಲ ನಂಬುಗೆಯನ್ನು ನಿಜಮಾಡುವ ದಿನದ ನೆನಪನ್ನು ಕಳೆಯಲಾರದೆ ಸದಾ ಕಾಯ್ದಿಡುವ ಆತುರದಿಂದ ಅವಳ ಬರ ಕಾಯುತಿದ್ದ, ಹೆಜ್ಜೆ ಗೆಜ್ಜೆಯ ನವಿರ ದನಿ ಕಾಯುತಿದ್ದ, ತನ್ನೊಳಗೆ ತನ್ನನ್ನೇ ಮರೆಯುತಿದ್ದ. ಪ್ರತಿದಿನ ಖುಷಿಯಿಂದ ಕಾಯಿಸುತ್ತಿದ್ದವಳವಳು, ದಿನ ಖುಷಿಯಿಂದ ಅವಳ ಕಾಯುತಿದ್ದ, ಕಾಯುತ್ತಲೇ ಇದ್ದ, ಅವಳು ಬರುತಾಳೆಂದು, ಕನಸ ನಿಜ ಮಾಡುವಳೆಂದು. ಮುಸ್ಸಂಜೆ ಅಡಿಯಿಟ್ಟು ಸೂರ್ಯ ಮರೆಯಾದರೂ ಅವನವಳ ಕಾಯುತ್ತಲಿದ್ದ. ದಿನ ಕಂತುವ ಹೊತ್ತು, ಕೇಳಿಸಿತ್ತವಳ ಹೆಜ್ಜೆಯ ಗತ್ತು. ಕಾದು ದೊರಕಿದ ಫಲದ ಸಿಹಿ, ಗಮ್ಮತ್ತು ಅವನಲಂದು ತುಂಬಿ ತುಳುಕುತಿತ್ತು. ಎಂದಿನಂತೆ ಬಳಿ ಬಂದು ಅವನ ಕೈಯೊಳಗೆ ಕೈಯಿಟ್ಟು ಕುಳಿತುಕೊಳ್ಳುವವಳು ಅಂದು ಮಾರು ದೂರದಲ್ಲೇ ನಿಂತಿದ್ದಳು. ಅವನು ಮನಸಾರೆ ಕೇಳಬೇಕೆಂದು ಕಾತುರದಿಂದ ಕಾಯುತ್ತಿದ್ದ ಅವಳ ಮಾತ ಕೇಳಲು ತಲೆಯೆತ್ತಿ ಅವಳೆಡೆಗೆ ಮುಖವಿಟ್ಟು, ಒಂದು ಪ್ರಶ್ನಾರ್ಥಕ ನಗೆ ಬೀರಿದ. ನಿಮಿಶಗಳ ನಿಶ್ಯಬ್ಧವನ್ನು ಸೀಳಿ ಅವಳು ಮಾತಾಡಿದ್ದಳು. ಅವನ ಕರ್ಣ ಪಟಲಗಳನ್ನು ಮೀರಿ, ಹೃದಯದ ಬಡಿತವನ್ನೂ ಕಂಪಿಸಿ ದೂರವಾಗಿತ್ತು, ದಿಗ್ಮೂಢನನ್ನಾಗಿಸಿತು ಅವಳಾಡಿದ ಮಾತು. ಅವಳ ಮಾತುಗಳೊಂದೊಂದೂ ಅವನ ಇಷ್ಟವನ್ನೆಲ್ಲ ಸ್ಪಂದಿಸುವುದೆಂದು ಕಾಯುತ್ತಿದ್ದವನ ಕಿವಿಗೆ ಕುದಿ ಗರಳ ಹೊಯ್ದಂತಾಯ್ತು. ಭ್ರಮೆಯ ಸಂಭ್ರಮದೊಳಗೆ ಜೀವಿತವ ಮರೆತವಗೆ ವಾಸ್ತವದ ಬರಸಿಡಿಲು ಸಾವ ತಂದಿತ್ತು. ಕ್ಷಣ ಹಿಂದೆ ಪಸರಿಸಿದ್ದ ಸಂತಸದ ಸಂಗೀತ ಸಂತಾಪ ಶೋಕದಲಿ ಮಾರ್ದನಿಸುತಿತ್ತು. ಜಗದೊಳಗೆ ಮನೆಮಾಡಿ ಜಗವ ಕಬಳಿಸಿ ಮೆಲ್ಲ ಅವನ ಮನಸನೂ ತುಂಬಿ ಇರುಳು ಸಾಗಿತ್ತು, ಬೆಳಕ ಕೊಂದಿತ್ತು, ಕಣ್ಬೆಳಕು ಸೋತಿತ್ತು.

ಸೋತಿತ್ತು ಅವಳ ಯೋಚನಾಲಹರಿ, ಹರಿದು ಚೂರಾಯ್ತು ಅವಳ ಸ್ವಂತಿಕೆಯ ಪರಿಧಿ. ಮನದಿಂದ ಅವನನ್ನು ದೂರವಿಡಲು ಪಟ್ಟ ಪಾಡೆಲ್ಲ ವೃಥಾ ವ್ಯರ್ಥವಾಗುತ್ತಿತ್ತೇ ಹೊರತು ನೆನಪು ಸಾಯುತ್ತಿರಲಿಲ್ಲ. ಅವನೊಂದಿಗಿನ ನಿತ್ಯ ಒಡನಾಟ, ಸಂತೋಷ ಸಾಂಗತ್ಯ, ಜೊತೆ ಕಂಡ ಕನಸು ಮರೆಯಲಾಗದ ಸತ್ಯ, ನಿಷ್ಕಳಂಕ ಚರಿತ್ರ, ಕಣ್ಣಿದ್ದೂ ಕಣ್ಬೆಳಕಿಲ್ಲದ ಅಂತರಂಗ ಸುನೇತ್ರ..... ಮತ್ತೆಂದೂ ಅವನನ್ನು ಕಾಣುವೆನೆಂದು ಕನಸೂ ಕಂಡಿರದ, ಅವಳ ಸ್ಮೃತಿಪಟಲದಿಂದ ದೂರಾಗಿ ಮಾಸಿ ಕಾಣದಾದ ನೆನಪಿನವ ಮತ್ತೆ ಎದುರಾಗಿದ್ದ. ಮರೆತ ದಿನಗಳಿಗೆಲ್ಲ ಮರುಜೀವ ನೀಡಿದ್ದ, ಅವಳೊಳಗೆ ಅವಳನ್ನೇ ಮರಳಿ ತಂದಿದ್ದ, ಜನ್ಮದೊಳಗಿನ್ನೊಂದು ಜನ್ಮ ನೀಡಿದ್ದ. ಜನುಮಗಳ ಜೀವನವ ಜೊತೆಯಾಗಿ ಜತನದಲಿ ಜಗವ ಜಯಿಸುವ ಜೈತ್ರ ಜ್ಯೋತಿಯಾಗಲಿಲ್ಲ, ಕಣ್ಣೊಳಗೆ ಕಣ್ಣಾಗಿ ಅವನೊಳಗೆ ಒಂದಾಗಿ ದಾರಿ ತೋರುವ ಧಾತ್ರಿ ತಾನಾಗಲಿಲ್ಲ ಎಂದು ಕೊರಗಿ, ಕ್ಷಣದ ಸಂಕಷ್ಟದಲಿ ಬೆನ್ನಾಗಿ ಜೊತೆಯಿರದೆ ಕಷ್ಟಕ್ಕೆ ಬೆನ್ನು ಹಾಕಿದ ದಿನಕೆ ಮರುಗಲಾರಂಭಿಸಿದಳು. ನಡೆಯಾರದೆ ಎಡವಿ ಕಾಲಡಿಯ ಮರೆವವನ ಕೈಹಿಡಿಯಲಾರದೆ ಹೋದೆನೆಂದು ನೊಂದಳು. ಸಾವರಿಸಿ, ಒಮ್ಮೆಯಾದರೂ ಅವನನ್ನು ಕಣ್ತುಂಬ ಕಂಡು ಕ್ಷಮೆ ಕೇಳಬೇಕೆಂದುಕೊಂಡು ನಿಶ್ಚಯಿಸಿ ತಿರುಗಿದ್ದಳು ಅವನೆಡೆಗೆ.

ಅವನೆಡೆಗೆ ಕೈಚಾಚಿ ಅವನ ಕೈಯೊಳಗೆ ಕೈಯಿಟ್ಟು ಅವನ ನಡೆಯಲ್ಲಿ ನಡೆಯಾಗಿ ನಡೆವ ಅವನವಳನ್ನು ಕಂಡು ಮತ್ತೆ ನಿಟ್ಟುಸಿರಿಟ್ಟಳು. ಕೈಗೂಡಿಸಲಾಗದ ಕನಸು ಕಮರಿಹೋಗಲು  ಸ್ವಯಂ ಕಾರಣವೆಂದು ಪಶ್ಚಾತ್ತಾಪದ ಕಂಬನಿಯಿಟ್ಟಳು. ಕಣ್ಣಳತೆಯಿಂದ ದೂರಾಗುವವರೆಗೂ ಅವರಿಬ್ಬರನ್ನು ನೋಡುತ್ತಾ ಕುಸಿದು ಕುಳಿತಳು. ಸುತ್ತಲಿನ ಬೆಳಕು ಕಪ್ಪಾಗಲಾರಂಭಿಸಿತ್ತು, ಇರುಳ ನೀಗುತ ಬೆಳಗಲಾರಂಭಿತ್ತು ಆಗಸದಲ್ಲಿ ಒಂದೊಂದಾಗಿ ಚುಕ್ಕಿ ತಾರೆಗಳು.

 ತಾರೆಗಳು ನಗುತ್ತಾ ಆಗಸದಲ್ಲಿ ಬೆಳಕು ತುಂಬುತ್ತಿತ್ತು. ಮನಕೆ ಮುದವಿಡುವ ಬೆಳದಿಂಗಳೂ ಜೊತೆ ನೀಡುತಿತ್ತು. ಹೊಸತಾದ ಮಳೆಹನಿಯು ಭುವಿಯ ಮಿಲನದಿ ಮಿಂದು ಮಣ್ಣ ಪರಿಮಳವನ್ನು ಸುತ್ತ ಪಸರಿಸುತಲಿತ್ತು. ಜಗದ ಕಣ್ಣುಗಳಲ್ಲಿ ಕತ್ತಲೆಯೇ ತುಂಬಿದ್ದರೂ ಅವನ ಅಂತಃಚಕ್ಷುಗಳೆರಡೂ ಬೆಳಕು ಕಂಡಿತ್ತು. ಕೈ ಹಿಡಿದಿರುವ ಕರಗಳೆಷ್ಟೋ ಕತ್ತಲಿಗೆ ನೂಕುತಿರಲು ಕಾರಣವೇ ಇಲ್ಲದಿರುವ ಕರವು ಬೆಳಕ ಉರಿಸಿತ್ತು. ಇಹದೊಳಗಿನ ಬಂಧನಗಳು ಬರಿದಾಗುತ ಬದುಕುತಿರಲು ಬದುಕಿನ ಬಾಂಧವ್ಯ ಬಯಸಿ ಹೊಸತು ಬದುಕೊಂದರಳಿತ್ತು. ಕನಸೊಳಗಿನ ಹಾದಿ ಕಂಡು, ಅದನ್ನೇ ಬಯಸಿ ಅರಸಿ ಹೊರಟವನು ಕಥೆಯಾಚಿನ ಕಿರು ಪಾತ್ರಕೆ ಹೊಸತು ಜೀವವಾದ, ಕಥೆಯೊಳಗೊಂದು ಕಥೆಯಾದ.