Jun 7, 2009

ತಣಿದ ಕಾಫಿ ಮತ್ತು ಅವನ ಸಿಹಿ ಶಬ್ದ ಹ್ಯಾಪಿ

‘ಜಾನೇ ತೂ ಯಾ ಜಾನೇ ನಾ’ ಸಿನೆಮಾ ನೋಡುವವರೆಗೂ ಅವನು ಕಥೆ ಹೇಳಿದವನೇ ಅಲ್ಲ. ಅದೇನಾಯ್ತೋ ನನ್ನ ಗೆಳೆಯ ಕಥೆ ಹೇಳುವ ಮನಸ್ಸು ಮಾಡಿದ. ನನಗೂ ಕಾಫಿಗೆ ತಿಂಡಿ ಬೇಕಿತ್ತು, ಕಥೆಯೂ ಶುರುವಾಯ್ತು.

ಶುರುವಾದದ್ದು ಆ ದಿನದಿಂದ..., ಮೊದಲು ಅವಳನ್ನು ಕಂಡ ದಿವಸದಿಂದ.

ದಿನವಿಡೀ ಅಕ್ಷರಗಳ ಜೊತೆಗೆ ಮಾತಾಡುವ, ನಗುವ, ನಿದ್ರಿಸುವ, ಕನಸ ಕಾಣುವ ಕಾಯಕ ಅವನದು. ಹೀಗಿರುವ ಒಂದು ದಿನ ಪತ್ರಿಕೆಯ ಸಂಪಾದಕ ಮಂಡಳಿಗೆ ಹೊಸತಾಗಿ ಸೇರಿದಳು. ಅವಳ ಹೆಸರು ಅಪ್ಸರ. ಹೆಸರಿನಷ್ಟೇ ಅಂದ ಚಂದ ಅವಳ ಕೆಲಸದಲ್ಲೂ ಕಾಣುತ್ತಿತ್ತು. ಗೆಳೆಯನೊಂದಿಗೂ, ಸಂಪಾದಕ ಮಂಡಳಿಯ ಎಲ್ಲರೊಂದಿಗೂ ಅಷ್ಟೇ ಬೇಗ ಬೆರೆತು, ಹೊಂದಿಕೊಂಡದ್ದೂ ಆಯ್ತು. ಹಾಗೆ ಕೆಲಸಗಳೂ ಕೂಡ ಅವಳನ್ನು... ಗೆಳೆಯನಂತೆ, ಉಳಿದವರಂತೆ.

ಉಳಿದವರಂತೆ ಅವರೂ ಹಾಗೇ ಇದ್ದರು. ವರುಷಗಳವರೆಗೂ ಬರೆವ ಕೆಲಸದವರು, ಬರೆಯ ಸಹೋದ್ಯೋಗಿ, ಸಹ-ಮಿತ್ರರು. ಆದರೂ ಅವರಿಬ್ಬರು ಮತ್ತೊಬ್ಬರ ಬಗ್ಗೆ ತಿಳಿದುಕೊಳ್ಳುವ ಮನಸ್ಸು ಮಾಡಲಿಲ್ಲ... ಅಂಥ ಸಂದರ್ಭವೂ ಬರಲಿಲ್ಲ.

ಬರಲಿಲ್ಲ ಎನ್ನಲಾಗದು. ಅದು ಅವನ ಮರೆಯದ ದಿನಗಳಲ್ಲೊಂದು. ಯಾವುದೋ ತ್ವರಿತ ಕೆಲಸಕ್ಕಾಗಿ ಜೊತೆಯಾಗಿ ಹೋಗಬೇಕಾಯ್ತು. ಆಯ್ತು... ಹೋದದ್ದೂ ಆಯ್ತು, ಹೋದ ಕೆಲಸವೂ ಸಹ. ಬರವಣಿಗೆ ಪತ್ರಿಕೆಯ ಪುಟವೂ ಸೇರಿತು. ಶ್ರಮ ಸಾರ್ಥಕವಾಯ್ತು.

ಅಂದಿನಿಂದ ಪ್ರತಿ ಕೆಲಸಕ್ಕೆ ಇದೇ ಜೊತೆ. ಪ್ರತಿ ಯಶವೂ ಜೊತೆ ಜೊತೆ.

ಜೊತೆ ಜೊತೆಗೆ ಪ್ರತಿ ದಿನವೂ ಮಾತು, ಓಡಾಟ, ನಗೆ, ಸಂದೇಶಗಳಲ್ಲಿ ವಾದ, ಪರಸ್ಪರ, ಒಡನಾಟದಲ್ಲಿ ಹೊಸ ಖುಶಿ, ಸಂತೋಷದ ಸವಿ.

ಸವಿನೆನಪುಗಳನ್ನು ನೆನೆಸಿ, ಬರೆವ ಅವನ ಲೇಖನಗಳೂ ಸಿಹಿ. ಬಹುಶಃ ಅದರ ಹಿಂದಿನ ಅರ್ಥ ಮಾತ್ರ ಯಾರಿಗೂ ಆಗಲಿಲ್ಲ. ಅವಳಿಗೂ..., ಇದೆಲ್ಲ ನೋಡುತ್ತಿದ್ದ ಜಗದ ಕಣ್ಣುಗಳಿಗೂ....

ಇವನ ಕಣ್ಣಲ್ಲಿ ಸದಾ ಅವಳೇ ಚಿತ್ರ, ಅಕ್ಷರ, ವಾಕ್ಯ, ಲೇಖನಮಾಲೆ. ದಿನದ ಪ್ರತಿ ಅಂಕಣಗಳಿಗೂ ಅವಳೇ ಸ್ಪೂರ್ತಿ. ಪ್ರತಿದಿನದ ಬರವಣಿಗೆಯಲ್ಲೂ ಒಂದು ಹೊಸ ಖುಷಿ, ಲವಲವಿಕೆ. ಅದೇ ಅವನ ಜೀವನ, ಕ್ಷಣ ಕ್ಷಣ, ಜಗ.

ಜಗದ ಪ್ರತಿ ದಿನದ ಉದಯವೂ ಅವನು ಹ್ಯಾಪಿಯಾಗಿರುವೆ ಎಂದು ದಿನ ಕಳೆವ ಮನಸ್ವಿ, ಪರರಿಗೂ ಅದನ್ನೇ ಬಯಸುವ ತಪಸ್ವಿ. ಆದರೂ ಅವನ ಮನಸಿನ ಒಳಗೆ, ಮೂಲೆಯಲ್ಲೆಲ್ಲೋ ಒಂದು ಕನಸ ಚಡಪಡಿಕೆ, ಹೇಳಲಾರದ ಮಾತ ತಹತಹಿತ, ತಳಮಳ. ಅದನ್ನವಳಲ್ಲಿ ಹೇಳಲೂ ಆಗದು, ಮನದೊಳಗೆ ಅವಳನ್ನು ಇಟ್ಟುಕೊಂಡಿರಲೂ ಆಗದು. ಆದರೂ ಆ ನೋವಲ್ಲೇ ದಿನ ದೂಡುತಿದ್ದ, ನಗೆಯೊಡನೆ... ತಪ್ಪು... ಬರೀ ನಗೆಯ ಹುಸಿದಿರಿಸೊಡನೆ ಎಂದರೆ ಲೇಸೆಷ್ಟೋ.

ಎಷ್ಟೋ ಸಲ ಅವಳಲ್ಲಿ ಮನದ ಮಾತು ಹಂಚಿಕೊಳ್ಳಲು ಪ್ರಯತ್ನಿಸಿದ... ಇಂದಿಗೂ ಆ ಪ್ರಯತ್ನದಲ್ಲಿ ಗೆದ್ದಿಲ್ಲ. ಅವಳ ಮನಸ್ಸು ಹೇಗಿರಬಹುದೋ..., ಮನದಲ್ಲಿ ಯಾರಿರಬಹುದೋ...? ಎಂದೆಲ್ಲಾ ಯೋಚನೆ, ಆಲೋಚನೆಯಲ್ಲೇ ಎಲ್ಲಾ...!

ಏನೆಲ್ಲಾ ಸಾಧನೆಯ ಹಾದಿ ತುಳಿದ ಹುಂಬ... ಇಲ್ಲಿ ಇಂದಿಗೂ ಸೋತವನಂತೆ ನಿಂತಿದ್ದಾನೆ. ಸೋಲ ವಿಷಾದತೆಯು ಎದೆ ತುಂಬಿದ್ದು, ಮನ ಮರುಗುತ್ತಿರುವುದನ್ನು ಕಣ್ಣು ಸಾರಿ ಹೇಳುತ್ತಿವೆ, ಲೇಖನಗಳೂ ಬದಲಾಗಿವೆ, ಆ ಕನಸುಗಳೂ ಕಾಣದಾಗಿವೆ..., ಕಳೆದ ಕಾಲದ ಜೊತೆ.

..... ಜೊತೆ ಜೊತೆಯಲ್ಲಿ ಮತ್ತೊಮ್ಮೆ ಅವರಿಬ್ಬರೂ ನಗುತ್ತಿದ್ದಾರೆ, ಮಾತಾಡುತ್ತಿದ್ದಾರೆ, ಸಂದೇಶದಲ್ಲೇ ವಾದ ಮಾಡುತ್ತಿದ್ದಾರೆ... ಅದೇ ಕಳೆದ ಸಾಲನ್ನು ನೆನಪಿಸಲು ಪ್ರಯತ್ನಿಸುವ ಗೆಳೆಯ, ಅವನ ಗೆಳೆಯರು, ಬರವಣಿಗೆಯ ಸಹ-ಮಿತ್ರರು, ಎಲ್ಲರೂ ಹ್ಯಾಪಿಯಾಗಿದ್ದಾರೆ. ಪರಸ್ಪರ ಮನಸ್ಸನ್ನು ಅರಿಯದೆ, ಜೊತೆಯಿರುವವರ ಕನಸನ್ನು ತಿಳಿಯದೆ..., ಪ್ರಯತ್ನವೂ ಮಾಡದೇ...!

ಕಥೆ ಹೇಳುತ್ತಾ ಆ ಗೆಳೆಯನಿಗೆ ಬಂದಿತ್ತು ಸಣ್ಣ ಸಂತೃಪ್ತಿಯ ನಿದ್ದೆ, ಅದನ್ನು ಕೇಳುತ್ತಾ ನನ್ನ ಕಣ್ಣೂ ಆಯ್ತು ಸ್ವಲ್ಪ ಒದ್ದೆ. ಆ ಮೌನದ ಜೊತೆ ಉಳಿದದ್ದು... ತಣಿದ ಕಾಫಿ ಮತ್ತು ಅವನ ಸಿಹಿ ಶಬ್ದ ಹ್ಯಾಪಿ.

No comments:

Post a Comment